
ವಿರಾಜಪೇಟೆ ಅ.16 NEWS DESK : ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘದ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ದೇಶ ರಕ್ಷಿಸುವ ಧೀರ ಯೋಧರು ಎಂದರೆ ನೆನಪಿಗೆ ಬರುವ ಜಿಲ್ಲೆಯಾಗಿರುವ ಕೊಡಗು, ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಯೋಧರನ್ನು ನೀಡಿದೆ. ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಂತೆ ಮಹಾನ್ ಯೋಧರನ್ನು ಕೊಡುಗೆಯಾಗಿ ನೀಡಿದ ವೀರರ ಜಿಲ್ಲೆ. ಕಳೆದ ದಶಕದವರೆಗೂ ಕೊಡಗಿನಲ್ಲಿ ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದೆಂದರೆ ಅದೊಂದು ಪ್ರತಿಷ್ಠೆ, ಹೆಮ್ಮೆಯಾಗಿತ್ತು. ಹೀಗಾಗಿ ಕೊಡಗಿನ ಪ್ರತಿ ಮನೆಯ ಒಬ್ಬರಾದರೂ ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿದ್ದವರು ಕಂಡುಬರುತ್ತಿದ್ದರು. ಕೊಡಗಿನವರ ಮನೆಗಳಲ್ಲಿ ದೇಶ ರಕ್ಷಣೆ ಬಗ್ಗೆ ಒಂದಿಲ್ಲೊಂದು ವೀರತೆಯ ಕಥೆಗಳಿರುತ್ತಿದ್ದವು. ಇಂತಹ ಒಂದು ಹೆಮ್ಮೆಯ ಜಿಲ್ಲೆ ನಮ್ಮ ಕೊಡಗು ಎಂದರೆ ತಪ್ಪಾಗಲಾರದು. ಯುವಜನತೆ ಹೆಚ್ಚು ಸೈನ್ಯಕ್ಕೆ ದೇಶ ರಕ್ಷಣೆಗೆ ಪಣ ತೊಡಬೇಕು ಎಂದು ಹೇಳಿದರು. ರೈತರು, ಸೈನಿಕರು, ಕಾರ್ಮಿಕರು ದೇಶದ ಪ್ರಮುಖ ನಾಯಕರು. ಮೂರು ಜನರ ಸಹಕಾರವಿಲ್ಲದೇ ನಮ್ಮ ಪ್ರತಿನಿತ್ಯದ ಕಾರ್ಯ ನಡೆಯುವುದು ಅಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಎನ್‍ಎಸ್‍ಎಸ್, ಎನ್‍ಸಿಸಿ ಸೇರಿಕೊಳ್ಳಬೇಕು. ಆಗ ಮಾತ್ರ ಅವರಲ್ಲಿ ಮನೋದೃಢತೆ ಬೆಳೆಯುತ್ತದೆ. ಸಮಾಜದಲ್ಲಿ ನಾವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸಿದ್ದೇವೆ. ಆದರೆ ನೈತಿಕವಾಗಿ ಕುಸಿದಿದ್ದೇವೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೆಪ್ಟಿನೆಂಟ್ ಕರ್ನಲ್ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಮಾತನಾಡಿ, ನಿಜವಾದ ಸೈನಿಕರೆಂದರೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರ ತಾಯಿ ಮತ್ತು ಹೆಂಡತಿಯಾಗಿರುತ್ತಾರೆ. ದೇಶ ರಕ್ಷಣೆಗೆ ಅಂತ ಮನೆಯಲ್ಲಿನ ಗಂಡಸರು ತೆರಳಿದ್ದಾಗ ಒಬ್ಬ ಗಟ್ಟಿಗಳಾಗಿ ಹೆಣ್ಣು ಮನೆಯ ಎಲ್ಲ ವ್ಯವಸ್ಥೆಗಳನ್ನು ನೋಡಿಕೊಂಡು ಸಂಸಾರ ಸಾಗಿಸುತ್ತಾರೆ. ಅವರಿಗೆ ಈ ಕೀರ್ತಿ ಸಲ್ಲಬೇಕು. ಎಲ್ಲ ದೇಶಗಿಂತ ಹೆಚ್ಚಿನ ಸೈನಿಕರು ನಮ್ಮ ದೇಶದಲ್ಲಿದ್ದಾರೆ. ಪೋಷಕರು ಮಕ್ಕಳಲ್ಲಿ ಶಿಕ್ಷಣದ ಜತೆ ದೇಶ ಪ್ರೇಮ ಬೆಳೆಸಬೇಕು ಎಂದರಲ್ಲದೆ ನಾವು ನಿತ್ಯ ದೇವರನ್ನು ಪ್ರಾರ್ಥಿಸುತ್ತೇವೆ. ಹಾಗೆಯೇ ಸೇನೆಯಲ್ಲಿ ಸೇವೆ ಮಾಡುವ ಸೈನಿಕರನ್ನು ನಾವು ದಿನವೂ ನೆನಪಿಸಿಕೊಳ್ಳಬೇಕು. ಸಮಾಜ ತುಂಬಾ ಸಂಕೀರ್ಣವಾಗುತ್ತಿದೆ. ಶಿಸ್ತು, ಸಂಯಮ, ಪ್ರಾಮಾಣಿಕತೆ, ಬದ್ಧತೆಯಿಂದ ಮಾನವ ಕಾರ್ಯ ನಿರ್ವಹಿಸಬೇಕು. ಆಗ ಕಲುಷಿತಗೊಂಡ ಮನುಷ್ಯನ ಮನಸ್ಸು ಮಾಧವನೆಡೆಗೆ ತಿರುಗಲು ಸಾಧ್ಯವಾಗುತ್ತದೆ ಎಂದರು. ವಿರಾಜಪೇಟೆ ಉಪವಿಭಾಗದ ಪೋಲೀಸ್ ಉಪನಿರೀಕ್ಷಕರಾದ ಮಹೇಶ್ ಕುಮಾರ್ ಮಾತನಾಡಿ, ದೇಶದ ಗಡಿ ಕಾಯುವ ಮಿಲಿಟರಿ ಪಡೆಗಳು ಭಾರತೀಯರಿಗೆ ನೀಡುವ ರಕ್ಷಣೆ, ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿ. ನೆಮ್ಮದಿ ಇರಬೇಕಾದರೆ ಭದ್ರತೆ ಇರಬೇಕು. ರಕ್ಷಣೆ ಎಂಬುದು ಎಲ್ಲರಿಗೂ ಆತ್ಮವಿಶ್ವಾಸ ನೀಡುತ್ತದೆ. ಇಂತಹ ತೃಪ್ತಿಯನ್ನು ದೇಶದ ಕೋಟಿಗಟ್ಟಲೆ ಜನರಿಗೆ ಸೈನಿಕರು ನೀಡುತ್ತಿದ್ದಾರೆ. ಅವರು ದೇಶದ ಶಾಂತಿ ಹಾಗೂ ನಮ್ಮ ಜೀವವನ್ನು ಕಾಪಾಡುವ ರಕ್ಷಕರು. ಸೈನಿಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ಸೇವೆ ಈಶ ಸೇವೆ ಎಂಬ ವಾಕ್ಯಕ್ಕೆ ಬದ್ಧರಾಗಿ ತಮ್ಮ ವೃತ್ತಿಯಲ್ಲಿ ಈಶನನ್ನು ಕಾಣುವ ಅವರ ಸೇವೆ ಅನುಪಮ ಎಂದರು. ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಮಾತನಾಡಿ, ಮಾಜಿ ಸೈನಿಕರು ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಮಾಜಿ ಸೈನಿಕರ ಸಂಘ ಮಾಜಿ ಸೈನಿಕರು, ಕುಟುಂಬ ವರ್ಗದವರ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಸೈನಿಕರ ಕುಟುಂಬ ವರ್ಗಕ್ಕೆ ಆರೋಗ್ಯ, ಶಿಕ್ಷಣದಂಥ ಅಗತ್ಯತೆಗಳ ಬಗ್ಗೆಯೂ ಸಂಘ ಗಮನ ಹರಿಸಿದೆ ಎಂದರು. ಕಾರ್ಯಕ್ರಮದಲ್ಲಿ ಮೇ.ಆ.ಬಾಚಿಮಂಡ ಕಾರ್ಯಪ್ಪ, ಕರ್ನಲ್ ಪುಟ್ಟಿಚಂಡ ಗಣಪತಿ, ದುದ್ದಿಯಂಡ ಹಸೈನಾರ್ ಸೂಫಿ, ಚಪ್ಪಂಡ ಕಾರ್ವ ಹರೀಶ್, ಕಟ್ಟೇರ ವಿಶ್ವನಾಥ್, ನೆಲ್ಲಮಕ್ಕಡ ಜಪ್ಪು ಮುದ್ದಯ್ಯ, ಎಂ.ಕೆ. ಸಲಾಂ, ತೋರೇರ ಪೂವಯ್ಯ, ನಾಮೇರ ನವೀನ್, ಮುಕ್ಕಾಟ್ಟೀರ ಪೊನ್ನಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರುಗಳಾದ ಚೇಂದ್ರಿಮಾಡ ಕೆ. ನಂಜಪ್ಪ, ಎಂ.ಕೆ. ಸಲಾಂ, ಪಟ್ರಪಂಡ ಎಂ.ಕರುಂಬಯ್ಯ, ಕೊಂಗಂಡ ಎ. ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ. ಬೋಪಯ್ಯ, ಅಪ್ಪಯ್ಯ ಹೆಚ್.ಕೆ. ಕಬ್ಬಚ್ಚಿರ ಎ. ಬೋಪಣ್ಣ, ಪಟ್ರಪಂಡ ಎ. ಚಂಗಪ್ಪ ಉಪಸ್ಥಿತರಿದ್ದರು.









