
ಮಡಿಕೇರಿ ಅ.15 NEWS DESK : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಆರಣ್ಯಾಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹಿಸಿ ಕರ್ನಾಟಕ ಆರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ನೇತೃತ್ವದಲ್ಲಿ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. ಕರ್ನಾಟಕ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ಮತ್ತು ಪದವೀಧರ ಸಂಘದ ಅಧ್ಯಕ್ಷ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡ ವಿದ್ಯಾರ್ಥಿಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆಯಲ್ಲಿ ಜಾಥಾ ಹೊರಡಿಸಿ ಘೋಷಣೆಗಳನ್ನು ಕೂಗಿ, ಮಾನವ ಸರಪಳಿ ನಿರ್ಮಿಸಿ ಹಾಗೂ ಬೀದಿ ನಾಟಕದ ಮೂಲಕ ಅರಣ್ಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಗೆ ತೆರಳಿ ಬೇಡಿಕೆಗಳ ಮನವಿಯನ್ನು ಸಲ್ಲಸಿದರು. ಎರಡನೇ ದಿನ ತರಗತಿ ಬಹಿಷ್ಕರಿಸಿ ಕಾಲೇಜು ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು. ಮೂರನೇ ದಿನ ಕಾಲೇಜಿನ ಮೈದಾನದಲ್ಲಿ ಅಣುಕು ಶವಯಾತ್ರೆ ಮೂಲಕ ಸರ್ಕಾರದ ನೀತಿ ಖಂಡಿಸಿ, ಅಸಮಾಧಾನ ವ್ಯಕ್ತಪಡಿಸಿದರು. ನಾಲ್ಕನೇ ದಿನ ಹಣೆಗೆ ಕಪ್ಪು ಪಟ್ಟಿಯನ್ನು ಧರಿಸಿ ಶಾಂತಿಯುತ ರೀತಿಯಲ್ಲಿ ಮುಷ್ಕರ ನಡೆಸಿ, ಐದನೇ ದಿನವೂಮುಷ್ಕರ ಮುಂದುವರಿಸಿದ್ದೇವೆ. ಆದರೂ ಇಲ್ಲಿಯವರೆಗೆ ಶಾಂತಿಯುತವಾಗಿ ಹೋರಾಟ ನಡೆಸಿದರೂ ಯಾವುದೇ ರೀತಿಯ ಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ನಾವು ಯಾರ ವಿರೋಧಕ್ಕೂ ಅಲ್ಲ. ನಮ್ಮ ಹಕ್ಕು, ಭವಿಷ್ಯ ಮತ್ತು ನ್ಯಾಯಕ್ಕಾಗಿ ನಿಂತಿದ್ದೇವೆ. ಉದ್ಯೋಗ ನಮ್ಮ ಕನಸು ಮಾತ್ರವಲ್ಲ, ನಮ್ಮ ಬದುಕಿನ ಆಧಾರವೂ ಹೌದು. ಆದ್ದರಿಂದ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ನಮ್ಮ ಮನವಿಯನ್ನು ಸಹಾನುಭೂತಿಯುಳ್ಳ ದೃಷ್ಟಿಯಿಂದ ಪರಿಗಣಿಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ತಪ್ಪಿದ್ದಲ್ಲಿ ಹೋರಾಟವನ್ನು ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.









