
ನಾಪೋಕ್ಲು ಅ.24 NEWS DESK : ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋಧಿ ಆರಾಧನೆ ಕಾರ್ಯಕ್ರಮ ಅ.27 ರ0ದು ಜರುಗಲಿದೆ. ಆದಿಮಾತೆ ಶ್ರೀ ಕಾವೇರಿಯ ತೀರ್ಥೋದ್ಭವ ಕಳೆದು ಸಂಪ್ರದಾಯಸ್ಥರ ಮನೆಗಳಲ್ಲಿ ಜರುಗುವ “ಕಣಿಪೂಜೆಯ” ದಿನದ ಸೂರ್ಯೋದಯದಿಂದ ಸರಿಯಾಗಿ ಹತ್ತನೇ ಸೂರ್ಯೋದಯದ ದಿನದಂದು ಕೊಡಗಿನಾದ್ಯಂತ ಪತ್ತಾಲೋಧಿ ಅಂದರೆ ಹತ್ತನೇ ಪವಿತ್ರ ದಿನವು “ತೊಲೆಯಾರ್ ಪತ್ತ್” ಎಂಬ ಪ್ರತೀತಿ ಪಡೆದಿದೆ. ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಈ ದಿನ ಕೊಡವ ಸಂಪ್ರದಾಯದಂತೆ ಕೈಗೊಳ್ಳುವ ಯಾವುದೇ ಕಾರ್ಯವು ಕಾರ್ಯಗತವಾಗುವುದಲ್ಲದೇ, ದೇವಾ ನುಗ್ರಹದೊಂದಿಗೆ ಅಕ್ಷಯವಾಗುವುದೆಂಬ ನಂಬಿಕೆ. ಪಾಡಿಯಲ್ಲಿ ಪರದಂಡ ಕುಟುಂಬಸ್ಥರ ವತಿಯಿಂದ ಸಂಪ್ರದಾಯದಂತೆ ಆ ದಿವಸ ಅಂದರೆ ಸೋಮವಾರ ತಾರೀಕು 27ರಂದು “ತೊಲೆಯಾರ್ ಪತ್ತ್ ಆರಾಧನೆ ” ನಡೆಯಲಿದೆ. ಅಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ತುಲಾಭಾರ ಸೇವೆಗಳು ಮಹಾಪೂಜೆಗಳು ನಡೆಯಲಿದೆ ಎಂದು ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೆ ಭಕ್ತಾದಿಗಳು ಆಗಮಿಸಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ದರ್ಶನ ಪಡೆದು ಕೃಪಾಶೀರ್ವಾದಗಳಿಗೆ ಪಾತ್ರರಾಗಲು ವಿನಂತಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.








