
ಮಡಿಕೇರಿ ಅ.23 NEWS DESK : ರಾಷ್ಟ್ರದ ಉದ್ದಗಲಕ್ಕೂ ನಿರಂತರವಾಗಿ ನಡೆಯುತ್ತಿರುವ ಅಪ್ರಾಪ್ತರು, ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕಠಿಣ ಕಾನೂನು ಜಾರಿಯ ಮೂಲಕ ಸ್ತ್ರೀಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಒಕ್ಕೂಟದ ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ ಮಾತನಾಡಿ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನುಗಳನ್ನು ರೂಪಿಸಿದ್ದರು, ದೌರ್ಜನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. *ಪಿಂಚಣಿ ಹೆಚ್ಚಿಸಿ* ಪ್ರಸ್ತುತ ರಾಜ್ಯ ಸರ್ಕಾರವು ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿ ಮತ್ತು ವಿಶೇಷ ಚೇತನರಿಗೆ ಪಿಂಚಣಿಯಾಗಿ ಮಾಸಿಕ 800 ರೂ.ಗಳಿಂದ 1200 ರೂ.ಗಳನ್ನು ನೀಡುತ್ತಿದ್ದು, ಇದು ದುರ್ಬಲ ವರ್ಗಕ್ಕೆ ಆಶಾಕಿರಣವಾಗಿದೆ. ಹೀಗಿದ್ದೂ ಇತ್ತೀಚಿನ ದಿನಗಳಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಈ ಪಿಂಚಣಿಯ ಮೊತ್ತವನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸುವ ಮೂಲಕ ದುರ್ಬಲ ವರ್ಗದವರ ಬದುಕಿಗೆ ಚೈತನ್ಯವನ್ನು ನೀಡುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು. *ಬೇಡಿಕೆಗಳು* ಅತ್ಯಾಚಾರಿಗಳು ಹಾಗೂ ಕೊಲೆಗಟುಕರಿಗೆ ಮರಣ ದಂಡನೆ ವಿಧಿಸಬೇಕು, ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು, ಭ್ರೂಣ ಲಿಂಗ ಪತ್ತೆ ತಡೆಗೆ ಅಗತ್ಯ ಕ್ರಮ ಕೈಗೊಂಡು ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಉದ್ಯೋಗ ನಡೆಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣವನ್ನು ನಿರ್ಮಿಸಬೇಕು, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ತಾರಾ, ಪ್ರಮುಖರಾದ ಲೂಸಿ ಜೇಮ್ಸ್, ಕಾರ್ಯಕರ್ತರಾದ ವಿಜಯ ನಾರಾಯಣ್, ಮಮತ, ರೀಟಾ, ಧನು ಕುಮಾರ್, ಅಕ್ಷಯ್, ಮೀನಾ ಕುಮಾರಿ, ಚಿನ್ನಮ್ಮ, ಓಡಿಪಿ ಸಾಂತ್ವನ ಕೇಂದ್ರದ ವಿಲ್ಮ, ಶ್ವೇತ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









