
ನಾಪೋಕ್ಲು ಅ.27 NEWS DESK : ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರ ಪ್ರಾಣಾಪಾಯದಿಂದ ಪಾರಾಗಿ, ಹಸು ಸಾವನ್ನಪ್ಪಿದ ಘಟನೆ ಪೇರೂರು ಗ್ರಾಮದಲ್ಲಿ ನಡೆದಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಪೇರೂರು ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಅಪ್ಪಚ್ಚಿರ ಹ್ಯಾರಿ ಪೊನ್ನಪ್ಪ ಕಾಡಾನೆ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡ ವ್ಯಕ್ತಿ. ಹ್ಯಾರಿ ಪೊನ್ನಪ್ಪ ತಮ್ಮ ತೋಟದಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುವ ಸಂದರ್ಭ ಮಚ್ಚೂರ ಮಂದ್ ಸಮೀಪ ಕಾಡಾನೆ ದಾಳಿ ನಡೆಸಿ ಕೋರೆಯಿಂದ ಹ್ಯಾರಿ ಪೊನ್ನಪ್ಪ ಅವರ ಎದೆಯ ಭಾಗಕ್ಕೆ ತಿವಿದೆ. ಸಮೀಪದಲ್ಲಿದ್ದವರು ಭಯದಿಂದ ಚೀರಾಡಿದ ಕಾರಣ ಆನೆ ಓಡಿದೆ. ಇದೇ ಸಂದರ್ಭ ಮಚ್ಚೂರ ಹರೀಶ್ ಬಿದ್ದಪ್ಪ ಎಂಬವರು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕಾಡಾನೆ ತಿವಿದು ತೀವ್ರ ಗಾಯಗೊಳಿಸಿದ್ದು, ಹಸು ಮರಣ ಹೊಂದಿ ನಷ್ಟ ಸಂಭವಿಸಿದೆ. ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹ್ಯಾರಿ ಪೊನ್ನಪ್ಪ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ತುರ್ತು ಚಿಕಿತ್ಸೆಗಾಗಿ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶು ವೈದ್ಯಾಧಿಕಾರಿ ಡಾ.ಚೇತನ್, ಸಿಬ್ಬಂದಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಕಾಳೇಗೌಡ, ಸಿಬ್ಬಂದಿಗಳು ಹಾಜರಿದ್ದರು. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









