
ಮಡಿಕೇರಿ ಅ.28 NEWS DESK : ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕೆಂದರೆ ಅಲ್ಲಿಯ ಮಹಿಳೆಯರು ಎಲ್ಲಾ ರಂಗದಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸುವಂತಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು. ಹಾತೂರು ಭಗವತಿ ಯುವತಿ ಮಂಡಳಿ ವತಿಯಿಂದ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದು ದಾನಿಗಳಾದ ಗಿಣಿ ಗಣಪತಿಯವರಾಗಿದ್ದಾರೆ. ತಾವು ದುಡಿದ ಹಣದಲ್ಲಿ ಒಂದು ಭಾಗವನ್ನು ಸಾಮಾಜಿಕ ಕಳಕಳಿಯಿಂದ ದಾನ ಮಾಡುವುದು ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು. ಇವರ ಈ ಕಾರ್ಯ ಇತರರಿಗೂ ಸ್ಪೂರ್ತಿಯಾಗಲಿ ಎಂದು ಕರೆ ನೀಡಿದರು. ಜನತೆ ತನಗೆ ಕೊಟ್ಟ ಅಧಿಕಾರದ ಸದ್ಬಳಕೆ ಆಗಬೇಕೆಂದರೆ ಜನಸಾಮಾನ್ಯರ ಕಷ್ಟ ನಷ್ಟಗಳಿಗೆ ಸ್ಪಂದಿಸುವುದು ತನ್ನ ಕರ್ತವ್ಯವಾಗಿದೆ ಎಂದು ಹೇಳಿದರು. ಭಗವತಿ ಯುವತಿ ಮಂಡಳಿಯವರು ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದು ನಾಡಿನ ಇತರ ಮಹಿಳೆಯರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೋಡಂದೇರ ಬಾಂಡ್ ಗಣಪತಿ, ಗ್ರಾಮ ಪಂಚಾಯತಿ ಅಧ್ಯಕ್ಷರು ಕೊಕ್ಕಂಡ ನಮಿತ ಬಿದ್ದಪ್ಪ, ಉಪಾಧ್ಯಕ್ಷರು ಕುಲಚಂಡ ಎಸ್ ಚಿಣ್ಣಪ್ಪ, ಚಂದ್ರಶೇಖರ್, ಕೊಂಗಂಡ ಗಿರಿಜಾ ಪೊನ್ನಮ್ಮ, ದೊಡ್ಡಮನೆ ಭೋಜಮ್ಮ, ಕೊಂಗೇಪಂಡ ಸುಶೀಲಾ ಮಾಚಯ್ಯ, ಗ್ರಾಮ ಪಂಚಾಯಿತಿ ಸದಸ್ಯರು ಕೊಕ್ಕಂಡ ಗಿಣಿ ಗಣಪತಿ, ಹಾತೂರು ಭಗವತಿ ಯುವತಿ ಮಂಡಳಿಯ ಅಧ್ಯಕ್ಷರು ಕೊಕ್ಕಂಡ ರೂಪಾ ಭೀಮಯ್ಯ, ಕಾರ್ಯದರ್ಶಿ ಕುಪ್ಪಂಡ ಮಲಾ ಪೂವಮ್ಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳಾದ ಗಿಣಿ ಗಣಪತಿಯವರು, ತಮ್ಮ ವೈಯುಕ್ತಿಕ ಧನ ಸಹಾಯವನ್ನು ಹಾತೂರು ಶಾಲೆಗೆ ಹಾಗೂ ಕೆಲವು ಫಲಾನುಭವಿಗಳಿಗೆ ವೈಯಕ್ತಿಕವಾಗಿ ನೀಡಿದರು.









