
ಮಡಿಕೇರಿ ಅ.30 NEWS DESK : ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಬದುಕು ನಡೆಸಲು ಅಗತ್ಯವಾದ ಸೇವೆಯನ್ನು ನೀಡುವ ಅಗತ್ಯತೆ ಇದ್ದು, ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯತೆ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೆ.ಎಂ. ತಿಳಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಡಗು ಜಿಲ್ಲೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಡಗು ಶಾಖೆ, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ನಗರದ ಬಾಲ ಭವನದಲ್ಲಿ ಆಯೋಜಿತ ‘ವಿಶ್ವ ಹಾಸ್ಪಿಸ್ ಮತ್ತು ಉಪಶಮನ ಆರೈಕೆ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯು ಪ್ರಸ್ತುತ ಮಡಿಕೇರಿ ನಗರದಲ್ಲಿ ಉಪಶಮನ ಆರೈಕೆ ಕಾರ್ಯಕ್ರಮವನ್ನು ಪ್ರಾರಂಭಿಸಿ ಗೃಹಾಧಾರಿತ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದು ತಿಳಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ವಿಮಲ ಕೆ. ಜಿ. ಮಾತನಾಡಿ, ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳಿಗೆ ನೆಮ್ಮದಿಯಾಗಿ ಮತ್ತು ಮಾನಸಿಕ ನೆಮ್ಮದಿಯೊಂದಿಗೆ ತಮ್ಮ ಕೊನೆಯ ದಿನಗಳನ್ನು ಕಳೆಯುವಲ್ಲಿ ಸಮಾಜ ಹಾಗೂ ಮನೆಯವರು ಸಹಕರಿಸುವಂತೆ ಮಾಡುವುದೇ ಉಪಶಮನ ಆರೈಕೆಯ ಉದ್ದೇಶ. ಈ ಕಾರ್ಯವು ಕೊಡಗಿನಾದ್ಯಂತ ವಿಸ್ತರಿಸಿ ಎಲ್ಲರಿಗೂ ಇದರ ಸೇವೆ ಸಿಗುವಂತಾಗಬೇಕು ಎಂದು ಆರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಸಭಾಪತಿಗಳಾದ ರವೀಂದ್ರ ರೈ ಮಾತನಾಡಿ, ಉಪಶಮನ ಆರೈಕೆಯ ಮೂಲಕ ಸಮಾಜಕ್ಕೆ ಉತ್ತಮ ಆರೋಗ್ಯ ರಕ್ಷಣೆಯನ್ನು ನಾವೆಲ್ಲರೂ ಸೇರಿ ಒದಗಿಸೋಣ ಮತ್ತು ಈ ಕಾರ್ಯಕ್ರಮಕ್ಕೆ ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಬೆಂಬಲ ಸದಾ ಇರುತ್ತದೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಜಯ್ ಸೂದ್ ವಹಿಸಿ ಮಾತನಾಡಿ, ಮರಣ ಎಂಬುದು ಎಲ್ಲರಿಗೂ ಬರುತ್ತದೆ. ಆದರೆ, ಆ ಮರಣದ ದಿನಗಳನ್ನು ರೋಗಿಯು ಉತ್ತಮ ರೀತಿಯಲ್ಲಿ ಕಳೆಯಬೇಕು ಎಂಬುದೇ ಉಪಶಮನ ಆರೈಕೆಯ ಮುಖ್ಯ ಉದ್ದೇಶ. ಈ ಉಪಶಮನ ಆರೈಕೆ ಕಾರ್ಯಕ್ರಮಕ್ಕೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ವೈದ್ಯರುಗಳು ಪ್ರತೀ ವಾರ ಬರುತ್ತಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಫಿಸಿಯೋಥೆರಪಿಸ್ಟ್ ಮತ್ತು ಸ್ಪೀಚ್ ಲಾಂಗ್ವೇಜ್ ಪೆಥಾಲಜಿಸ್ಟ್‍ಗಳು ಕೂಡ ಬರುತ್ತಿದ್ದು, ಸಮುದಾಯದಲ್ಲಿರುವ ಫಲಾನುಭವಿಗಳಿಗೆ ತುಂಬಾ ಸಹಾಯವಾಗುತ್ತಿದೆಯೆಂದು ತಿಳಿಸಿದರು. ಕಾರ್ಯಕ್ರಮದ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಉಪಶಮನ ಆರೈಕೆ ಕಾರ್ಯಕ್ರಮದ ಹಿರಿಯ ವೈದ್ಯಾಧಿಕಾರಿಗಳಾದ ಡಾ.ವಿಭಾ ಎಸ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೇಗಳಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ.ಶ್ರೀನಿವಾಸ್ ಬಿ.ಎಲ್., ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ರತ್ನಾಕರ್ ರೈ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರವರಾದ ಮೇ. ಡಾ.ರಾಘವ ಬಿ., ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ಅಂಕಾಚಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









