
ಸೋಮವಾರಪೇಟೆ NEWS DESK ಅ.31 : ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ಎಡದಂಟೆ ಗ್ರಾಮಕ್ಕೆ ಶಾಸಕರಾದ ಡಾ.ಮಂತರ್‌ಗೌಡ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಎಡದಂಟೆ ಜಲಪಾತ ವೀಕ್ಷಿಸಿದ ಶಾಸಕರು, ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಡಲು, ಜಲಪಾತ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕಲ್ಪಿಸಲಾಗುವುದು ಎಂದು ಹೇಳಿದರು. ಮೊದಲು ಮೆಟ್ಟಿಲುಗಳನ್ನು ನಿರ್ಮಿಸಲು ಅಂದಾಜುಪಟ್ಟಿಯನ್ನು ತಯಾರಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಸೂಚಿಸಿದರು. ಕೂತಿ ಮುಖ್ಯ ರಸ್ತೆಯಿಂದ ಎಡದಂಟೆ ಗ್ರಾಮಕ್ಕೆ ಒಂದೂವರೆ ಕಿ.ಮೀ.ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಎಡದಂಟೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಎಂ.ರವಿ ಮನವಿ ಮಾಡಿದರು. ರಸ್ತೆ ಅಭಿವೃದ್ದಿಗೆ ಅನುದಾನ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದರು. ಜಲಪಾತ ಅಭಿವೃದ್ಧಿ ಹಾಗು ಅದೇ ಮಾರ್ಗವಾಗಿ ರುದ್ರಗಿರಿ ಬೆಟ್ಟಕ್ಕೆ ಸಂಪರ್ಕ ರಸ್ತೆಗಾಗಿ 5 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಈ ಹಿಂದಿಯೆ ಪ್ರವಾಸೋಧ್ಯಮ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ ಅನುದಾನ ಸಿಕ್ಕಿಲ್ಲ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ಶಾಸಕರ ಗಮನಕ್ಕೆ ತಂದರು. ಮೊದಲು ಲೋಕೋಪಯೋಗಿ ಇಲಾಖೆಯಿಂದ ಗ್ರಾಮದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿ ನಂತರ, ಪ್ರವಾಸೋಧ್ಯಮ ಇಲಾಖೆಯಿಂದ ಅನುದಾನಕ್ಕೆ ಪ್ರಯತ್ನ ಮಾಡೋಣ ಎಂದು ಶಾಸಕರು ಹೇಳಿದರು. ಈ ಸಂದರ್ಭ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ, ಗ್ರಾಮಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಿ.ಎಂ.ಗಿರೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಕೆಡಿಪಿ ಸದಸ್ಯ ಕೆ.ಯು.ಜಗದೀಶ್, ಪಿಡಿಒ ಹರೀಶ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.








