
ಮಡಿಕೇರಿ NEWS DESK ಅ.24 : ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುವ ಉದ್ದೇಶದದಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.1 ರಂದು ನವದೆಹಲಿ ಚಲೋ ಕೊಡವ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಸ್ವ-ನಿರ್ಣಯ ಮತ್ತು ಸ್ವ-ಆಡಳಿತದ ಹಕ್ಕೊತ್ತಾಯಗಳ ಪರ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆ ನ.1ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಿದೆ. ರಾಜ್ಯ ಮರುಸಂಘಟನಾ ದಿನವನ್ನು “ಕೊಡವ ನೆಲದ ದುರಾಕ್ರಮಣದ ದಿನ” ಎಂದು ಆಚರಿಸುವುದಾಗಿ ಮಾಹಿತಿ ನೀಡಿದ್ದಾರೆ. 1956 ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರೀತಿಯ ತಾಯ್ನಾಡನ್ನು ಅಂದರೆ ಹಿಂದಿನ “ಸಿ” ಭಾಗವಾದ ಕೊಡವರ ರಾಜ್ಯವನ್ನು ಕಳೆದುಕೊಂಡ ದಿನ. ಇದು 20 ನೇ ಶತಮಾನದ ಅತ್ಯಂತ ದೊಡ್ಡ ಭೌಗೋಳಿಕ-ರಾಜಕೀಯ ಉತ್ಪಾತವಾಗಿದೆ. ರಾಜ್ಯ ಮರುಸಂಘಟನಾ ಕಾಯ್ದೆಯಡಿ ನಮ್ಮ ರಾಜ್ಯವನ್ನು ವಿಲೀನಗೊಳಿಸಿದ ನಂತರ ಕೊಡವರು ತಮ್ಮ ಸ್ವಂತ ತಾಯ್ನಾಡಿನಲ್ಲಿ ಅಸ್ತಿತ್ವವಿಲ್ಲದವರಾದೆವು. ನಮ್ಮ ವಿಶಿಷ್ಟ ಆನಿಮಿಸ್ಟಿಕ್ ಗುರುತು, ಜಾನಪದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಾನೂನು ವ್ಯವಸ್ಥೆಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲಾಯಿತು. ಬಹುಸಂಖ್ಯಾತ ಸಮುದಾಯಗಳ ಅನುಕೂಲಕ್ಕಾಗಿ ಮತ್ತು ಪ್ರಯೋಜನಕ್ಕಾಗಿ ಕೊಡವರನ್ನು ರಾಜ್ಯ ಬಲದಿಂದ ಏಕರೂಪಗೊಳಿಸಲಾಗಿದೆ. ವ್ಯವಸ್ಥಿತವಾಗಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಸರಕಾರಿ ವ್ಯವಸ್ಥೆ ಆಕ್ರಮಣಕಾರಿ ಶಕ್ತಿಯಂತೆ ವರ್ತಿಸುತ್ತಿದೆ, ಕೊಡವರನ್ನು ಅಧೀನ ಪ್ರಜೆಗಳಾಗಿ ಮತ್ತು ಕೊಡವಲ್ಯಾಂಡ್ ಅನ್ನು ಸಂಪನ್ಮೂಲ ಉತ್ಪಾದಿಸುವ ಆಂತರಿಕ ವಸಾಹತು – ಆಕ್ರಮಿತ ಪ್ರದೇಶವಾಗಿ ಪರಿಗಣಿಸುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಕೊಡವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರದ ಎದುರು ನಮ್ಮ ನೋವು ಮತ್ತು ಸಂಕಷ್ಟವನ್ನು ಎತ್ತಿ ತೋರಿಸಲು ಹಾಗೂ ಜಾಗತಿಕ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸಲು ನ.1 ರಂದು ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ. ಕರ್ನಾಟಕ ಸರಕಾರ ಮತ್ತು ಭಾರತ ಸರಕಾರ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಸಿಎನ್‌ಸಿ ಸಂಘಟನೆ ಕೊಡವರ ಪರ ಪ್ರತಿಪಾದಿಸಿರುವ ಬೇಡಿಕೆಗಳನ್ನು ಸಾಂವಿಧಾನಿಕ ಪರಿಹಾರವಾಗಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಕೊಡವಲ್ಯಾಂಡ್ ಅನ್ನು ಸಂವಿಧಾನದ 6 ನೇ ಶೆಡ್ಯೂಲ್ ಅಡಿಯಲ್ಲಿ ತರಬೇಕು. ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರನ್ನು ಪರಿಶಿಷ್ಟ ಪಂಗಡಗಳ (Sಖಿ) ವರ್ಗೀಕರಣದ ಅಡಿಯಲ್ಲಿ ಸೇರಿಸಬೇಕು ಮತ್ತು ಸಿಖ್ಖರ ಕಿರ್ಪಾಣ್ ಗೆ ಸಮಾನವಾಗಿ ಸಂವಿಧಾನದ ಆರ್ಟಿಕಲ್ 25 ಮತ್ತು 26 ರಡಿಯಲ್ಲಿ ಕೊಡವ ಧಾರ್ಮಿಕ ಸಂಸ್ಕಾರ ಗನ್ ತೋಕ್ ಹಕ್ಕನ್ನು ಅನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಪ್ರಾರಂಭಿಸಬೇಕು. ಕೊಡವರನ್ನು ಅಳಿವಿನಂಚಿನಲ್ಲಿರುವ ಮತ್ತು ಕ್ಷೀಣಿಸುತ್ತಿರುವ ಸಮುದಾಯವೆಂದು ಗುರುತಿಸಿ ಖಚಿತಪಡಿಸಬೇಕು. 2026–27 ರಲ್ಲಿ ನಡೆಯುವ 16ನೇ ರಾಷ್ಟ್ರೀಯ ಜನಸಂಖ್ಯಾ ಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕಾಲಂ ಅಳವಡಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡವ ಜನಾಂಗೀಯತೆಯಲ್ಲಿ ಯಾವುದೇ ಚತುರ್ಭುಜ ಜಾತಿ ವ್ಯವಸ್ಥೆ ಇಲ್ಲ. ಸಪ್ತಪದಿ ಧಾರ್ಮಿಕ ಆಚರಣೆಯು ಕೊಡವರಿಗೆ ತಿಳಿದಿಲ್ಲ. 18 ನೇ ಶತಮಾನದ ಕೊಡವಲ್ಯಾಂಡ್ನ ಪರಕೀಯ ಆಡಳಿತಗಾರ ಲಿಂಗರಾಜ “ಹುಕುಮ್ನಾಮ” ಎಂಬ ತನ್ನ ಘೋಷಣೆಯಲ್ಲಿ ಕೊಡವರನ್ನು ಧಾರ್ಮಿಕೇತರ ಆನಿಮಿಸ್ಟಿಕ್ ಜನಾಂಗ ಎಂದು ದಾಖಲಿಸಿದ್ದಾರೆ. 1871–72 ರಿಂದ 1931 ರವರೆಗಿನ ಬ್ರಿಟಿಷ್ ಯುಗದಲ್ಲಿ ಭಾರತದ ಮೊದಲ ಜನಗಣತಿಯು ಕೊಡವರನ್ನು ಜಾತಿ-ರಹಿತ ಜನಾಂಗ ಎಂದು ದಾಖಲಿಸಿದೆ. ಆದಿಮಸಂಜಾತ ಜನರ ಹಕ್ಕುಗಳ ಕುರಿತು ವಿಶ್ವ ರಾಷ್ಟ್ರ ಸಂಸ್ಥೆಯ ಚಾರ್ಟರ್ನಲ್ಲಿ ಘೋಷಿಸಲಾದ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಬೇಕು. ಸಂವಿಧಾನದ 25 ಮತ್ತು 26 ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ ಜನಾಂಗೀಯ “ಸಂಸ್ಕಾರ ಬಂದೂಕು” ಹಕ್ಕುಗಳ ರಕ್ಷಣೆಯಾಗಬೇಕು. ಸಂವಿಧಾನದ 8ನೇ ಶೆಡ್ಯೂಲ್ ನಲ್ಲಿ ಕೊಡವ ತಕ್ ಸೇರ್ಪಡೆ, ಶೈಕ್ಷಣಿಕ ಪಠ್ಯಕ್ರಮ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ಅದನ್ನು ಪರಿಚಯ ಮಾಡಬೇಕು. ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಕೊಡವ ಜಾನಪದ ಪರಂಪರೆಯ ಸೇರ್ಪಡೆಯಾಗಬೇಕು. ಜೀವನದಿ ಕಾವೇರಿಯನ್ನು “ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ” ಹೊಂದಿರುವ ಜೀವಂತ ಅಸ್ತಿತ್ವವಾಗಿ ಗುರುತಿಸಬೇಕು ಮತ್ತು ಕೊಡಗಿನಲ್ಲಿ ಪ್ರಮುಖ ನೀರಿನ ಪಾಲಿನ ಬಳಕೆಯಾಗಬೇಕು. ಕಾವೇರಿಯ ಜನ್ಮಸ್ಥಳ ತಲಕಾವೇರಿಯನ್ನು ಜೆರುಸಲೆಂ ಮಾದರಿಯಲ್ಲಿ ಆದಿಮಸಂಜಾತ ಕೊಡವರ ಪವಿತ್ರ ಯಾತ್ರಾ ಸ್ಥಳವೆಂದು ಪರಿಗಣಿಸಬೇಕು.
ದೇವಟ್ ಪರಂಬ್ ನರಮೇಧ ದುರಂತ ಸ್ಥಳ, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಪಿತೂರಿಯಲ್ಲಿ ನಡೆದ ರಾಜಕೀಯ ಹತ್ಯೆಗಳು, ಉಲುಗುಲಿ, ಮುಳ್ಳುಸೋಗೆ, ಲಕ್ಡಿಕೋಟೆಯಲ್ಲಿ ಯುದ್ಧ ಇವುಗಳ ಸ್ಮರಣಾರ್ಥ ಸ್ಮಾರಕಗಳು ಸ್ಥಾಪನೆಯಾಗಬೇಕು ಮತ್ತು ಪರಂಪರೆಯ ತಾಣಗಳ ಸಂರಕ್ಷಣೆಯಾಗಬೇಕು. ಜನಸAಖ್ಯಾ ಬದಲಾವಣೆಗಳನ್ನು ತಡೆಗಟ್ಟಲು ಮತ್ತು ಅನುವಂಶಿಕ ಆಸ್ತಿಗಳನ್ನು ರಕ್ಷಿಸಲು ಇನ್ನರ್ ಲೈನ್ ಪರವಾನಗಿ ಅನುಷ್ಠಾನವಾಗಬೇಕು. ಹೊಸ ಸಂಸತ್ತಿನ “ಸೆಂಟ್ರಲ್ ವಿಸ್ಟಾ”ದಲ್ಲಿ ಪ್ರಾತಿನಿಧ್ಯ ಮತ್ತು ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿದ “ಸಂಘ” ಕ್ಷೇತ್ರದಂತೆ ಕೊಡವರಿಗೂ ವಿಶೇಷ ಸಂಸದೀಯ ಸ್ಥಾನ ನೀಡಬೇಕು ಮತ್ತು ವಿಧಾನಸಭಾ ಕ್ಷೇತ್ರ ರಚನೆಯಾಗಬೇಕು. ಪರರ ಪಾಲಾದ ಕೊಡವ ಪೂರ್ವಜರ ಆಸ್ತಿಗಳನ್ನು ಕೊಡವ ಸಮುದಾಯಕ್ಕೆ ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಸಾಂಪ್ರದಾಯಿಕ ಪ್ರದೇಶಗಳು ಮತ್ತು ಸಂಪನ್ಮೂಲಗಳನ್ನು ಮರಳಿ ಪಡೆಯುವ ಮತ್ತು ರಕ್ಷಿಸುವ ಹಕ್ಕನ್ನು ಒಳಗೊಂಡಂತೆ ಆದಿಮಸಂಜಾತ ಕೊಡವರ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಸತ್ಯಾಗ್ರಹದ ಸಂದರ್ಭ ಒತ್ತಾಯಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.








