
ವಿರಾಜಪೇಟೆ ನ.1 NEWS DESK : ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ತಂಡದ ವತಿಯಿಂದ ನವೆಂಬರ್‍ನಲ್ಲಿ ಆಯೋಜನೆಗೊಂಡಿರುವ, ಕಲ್ಲುಬಾಯ್ಸ್ ದಿವಂಗತ ಎ.ಕೆ ಸುಬ್ಬಯ್ಯ ಮೆಮೋರಿಯಲ್ ಕಪ್-ಹೊನಲು ಬೆಳಕಿನ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಬಿಡುಗಡೆಗೊಳಿಸಿದರು. ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿ, ಪಂದ್ಯಾವಳಿಗೆ ಶುಭ ಕೋರಿದರು. ಈ ಸಂದರ್ಭ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ರಹೀಮ್ ಅವರು, ನವೆಂಬರ್ 20, 21, 22 ಮತ್ತು 23ರಂದು 4 ದಿನಗಳ ಕಾಲ ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾವಳಿ ಭವ್ಯವಾಗಿ ನಡೆಯಲಿದೆ. ಈ ಫುಟ್ಬಾಲ್ ಟೂರ್ನಮೆಂಟ್ ಕೇವಲ ಸ್ಪರ್ಧೆಯಲ್ಲ. ಸ್ನೇಹ, ಸಹಕಾರ ಮತ್ತು ಮಾನವೀಯತೆಯ ವೇದಿಕೆಯಾಗಿದೆ. ಟೂರ್ನಮೆಂಟ್‍ನಿಂದ ಲಭ್ಯವಾಗುವ ಮೊತ್ತವನ್ನು ಸಿದ್ದಾಪುರದ ಡಯಾಲಿಸಿಸ್ ಪಡೆಯುತ್ತಿರುವ ಬಡ ರೋಗಿಗಳ ನೆರವಿಗೆ ನೀಡಲಾಗುತ್ತದೆ. ಕ್ರೀಡೆಯ ಮೂಲಕ ಸಮಾಜ ಸೇವೆ ಎಂಬ ಈ ಶ್ರೇಷ್ಠ ಉದ್ದೇಶಕ್ಕಾಗಿ ಎಲ್ಲಾ ಫುಟ್ಬಾಲ್ ಪ್ರೇಮಿಗಳು, ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಈ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸಿ, ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಬೇಕು. ಕ್ರೀಡೆ ಒಗ್ಗಟ್ಟಿನ ಚಿಹ್ನೆ, ಸೇವೆ ಮಾನವೀಯತೆಯ ಮಾರ್ಗ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರಾದ ಮಹಮ್ಮದ್ ರಾಫಿ, ಎಸ್ ಎಚ್. ಮತೀನ್, ರಾಜೇಶ್, ಕೊಲ್ಲಿರ ಬೋಪಣ್ಣ, ನಾಸಿರ್, ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಆರ್.ಕೆ. ಸಲಾಂ, ಕಾಂಗ್ರೇಸ್ ಮುಖಂಡ ಜಾಫರ್, ಕಲ್ಲು ಬಾಯ್ಸ್ ಸಂಘಟನೆಯ ಅಧ್ಯಕ್ಷ ರಹೀಮ್, ಹಾಗೂ ಆಯೋಜಕರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.









