
ಮಡಿಕೇರಿ ನ.3 NEWS DESK : ಅವಕಾಡೊ ಹಣ್ಣು ಕುಯ್ಯುವ ವೇಳೆ ಮರದಿಂದ ಬಿದ್ದು, ಸೊಂಟದ ಮೂಳೆ ಮುರಿದು ತೀವ್ರ ತೊಂದರೆಯಿಂದ ನರಳುತ್ತಿದ್ದ ಕೂಲಿ ಕಾರ್ಮಿಕ ರಾಮಚಂದ್ರಪ್ಪ ಅವರು ಗುಣಮುಖರಾಗಿದ್ದು, ಚಿಕಿತ್ಸೆಗೆ ಸಹಕರಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸಂದರ್ಭ ಪಾಲಿಬೆಟ್ಟದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಚೆನ್ನಯನಕೋಟೆ ಅವರು ತಕ್ಷಣವೇ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಿದರು. ವೈದ್ಯರು ಶಸ್ತ್ರಚಿಕಿತ್ಸೆಗೆ ಸುಮಾರು ರೂ.3 ಲಕ್ಷ ವೆಚ್ಚ ಬರುವುದಾಗಿ ತಿಳಿಸಿದರು. ಈ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮಾಹಿತಿ ನೀಡಿದ ಮೇರೆಗೆ ಶಾಸಕರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ , ಕೆ.ಆರ್.ಆಸ್ಪತ್ರೆಯ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ತಮ್ಮ ಕಾರ್ಯದರ್ಶಿಗಳ ಮೂಲಕ ಶಿಫಾರಸು ಪತ್ರ ನೀಡಿ, ಸರ್ಕಾರದ ಸಹಾಯದಡಿ 3 ಲಕ್ಷ ರೂಪಾಯಿಗಳ ವೆಚ್ಚದ ಉಚಿತ ಶಸ್ತ್ರಚಿಕಿತ್ಸೆ ನಡೆಸಿ ಕೊಡುವಲ್ಲಿ ಮಾನವೀಯತೆ ಮೆರೆದಿದ್ದಾರೆ. ಇಂದು ರಾಮಚಂದ್ರಪ್ಪ ಸಂಪೂರ್ಣ ಗುಣಮುಖರಾಗಿದ್ದು, ನಡೆಯುವಂತಾಗಿದೆ. ತಮ್ಮ ಆರೋಗ್ಯವನ್ನ ಉಳಿಸಿದ, ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಣೇಶ್ ಚೆನ್ನಯನಕೋಟೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣುವಂಡ ರತ್ನ ಸುಬ್ಬಯ್ಯ, ಮಾಳೇಟಿರ ಸಾಬು ಕಾಳಪ್ಪ ಹಾಗೂ ಪಕ್ಷದ ಕಾರ್ಯಕರ್ತರಾದ ಮಿಲನ್ ಸುಬ್ಬಯ್ಯ, ದರ್ಶನ್, ರತನ್ ಭೀಮಯ್ಯ ಅವರೊಂದಿಗೆ ವಿರಾಜಪೇಟೆಯ ಶಾಸಕರ ಗೃಹ ಕಛೇರಿಗೆ ಬಂದು ಮಾಲಾರ್ಪಣೆ ಮಾಡಿ ಧನ್ಯವಾದ ಸಲ್ಲಿಸಿದರು.









