
ಮಡಿಕೇರಿ NEWS DESK ಮೇ 18 : ಮಕ್ನಾ ಆನೆ ಬಿದ್ದ ಪರಿಣಾಮ ಚೆನ್ನೈಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಡಗಿನ ಹೆಸರುವಾಸಿ ಪ್ರವಾಸಿತಾಣ ದುಬಾರೆಯಲ್ಲಿ ನಡೆದಿದೆ. ಚೆನ್ನೈ ಮೂಲದ ಪಲ್ಲಾವರಂ ನ ನಿವಾಸಿ ಜುನೆಸ್ಸಿ (33) ಮೃತ ದುರ್ದೈವಿ. ಇವರ ಪತಿ ಜೋಯಲ್ ಗೂ ಗಾಯಗಳಾಗಿದೆ. ಸಾಕಾನೆ ಮಕ್ನಾ ಆನೆ ಮಾರ್ತಾಂಡನನ್ನು ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ದೃಶ್ಯವನ್ನು ಪ್ರವಾಸಿಗರು ವೀಕ್ಷಿಸುತ್ತಿದ್ದರು. ಈ ಸಂದರ್ಭ ಮದವೇರಿದ ಮತ್ತೊಂದು ಸಾಕಾನೆ “ಕಂಜನ್” ಏಕಾಏಕಿ ಮಕ್ನಾ ಆನೆ ಮೇಲೆ ದಾಳಿ ಮಾಡಿದೆ. ಮಕ್ನಾ ಆನೆ ಬಿದ್ದಿದ್ದು, ಇದರ ಪಕ್ಕದಲ್ಲಿದ್ದ ಜುನೆಸ್ಸಿ ಅವರು ಕೆಳ ಭಾಗದಲ್ಲಿ ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡರು. ಗಾಯಾಳು ಜುನೆಸ್ಸಿ ಅವರನ್ನು ಕುಶಾಲನಗರದ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಗಾಯಗೊಂಡ ಪತಿ ಜೋಯಲ್ ಗೆ ಚಿಕಿತ್ಸೆ ನೀಡಲಾಗಿದೆ. ಪತಿಯ ಕೈಯಲ್ಲಿದ್ದ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ. ನದಿಯಲ್ಲಿ ಸಾಕಾನೆ “ಕಂಜನ್” ಮಕ್ನಾ ಆನೆ ಮೇಲೆ ದಾಳಿ ಮುಂದುವರಿಸುತ್ತಲೇ ಇದ್ದಾಗ ಆತಂಕಗೊoಡ ಪ್ರವಾಸಿಗರು ಸ್ಥಳದಿಂದ ಚದುರಿದರು. ಘಟನೆ ಸಂದರ್ಭ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸ್ಥಳದಲ್ಲಿದ್ದರಾದರೂ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಪ್ರವಾಸಿಗರು ಆಘಾತಗೊಂಡಿದ್ದಾರೆ. *ಸಚಿವರ ಸಂತಾಪ* ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಸಂತಾಪ ಸೂಚಿಸಿದ್ದು, ಇದು ಅತ್ಯಂತ ಆಘಾತಕರ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ. *ಅಂತರ ಕಾಯ್ದುಕೊಳ್ಳಲು ಸೂಚನೆ* ಆನೆಗಳು ಸೇರಿದಂತೆ ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ, ಪ್ರಾಣಿಗಳ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ಅವು ಯಾವಾಗ ಯಾವ ರೀತಿ ವರ್ತಿಸುತ್ತವೆ ಎಂದು ಊಹಿಸುವುದೂ ಕಷ್ಟವಾಗುತ್ತದೆ. ಹೀಗಾಗಿ ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ. *ಶಾಸಕ ಮಂತರ್ ಗೌಡ ಭೇಟಿ* ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಜುನೆಸ್ಸಿ ಅವರ ಪತಿ ಜೋಯಲ್ ಹಾಗೂ ಪುತ್ರಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಅರಣ್ಯ ಅಧಿಕಾರಿಗಳಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಫೋಟೋ :: ಎಲಿಫೆಂಟ್, ಮಂತರ್ ಗೌಡ










