
ಮಡಿಕೇರಿ NEWS DESK ಮೇ 19 : ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ “ಕಂಜನ್” ನಿಂದ ದಾಳಿಗೊಳಗಾಗಿದ್ದ ಮಕ್ನಾ ಆನೆ ಮಾರ್ತಾಂಡ (34) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ. ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯ ನದಿಯಲ್ಲಿ ಸೋಮವಾರ “ಕಂಜನ್” ಏಕಾಏಕಿ ಮಾರ್ತಾಂಡನ ಮೇಲೆ ದಾಳಿ ಮಾಡಿತ್ತು. “ಕಂಜನ್” ನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಘಾಸಿಗೊಂಡಿದ್ದ ಮಾರ್ತಾಂಡನಿಗೆ ದುಬಾರೆ ಸಾಕಾನೆ ಶಿಬಿರದ ವೈದ್ಯಾಧಿಕಾರಿ ಡಾ.ಮುಜೀಬ್ ಅವರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಾರ್ತಾಂಡ ಕೊನೆಯುಸಿರೆಳೆದಿದೆ. “ಕಂಜನ್” ಮಾರ್ತಾಂಡನ ಮೇಲೆ ದಾಳಿ ಮಾಡುವ ಸಂದರ್ಭ ಮಾವುತರು ಹಾಗೂ ಕಾವಡಿಗರು ನಿಯಂತ್ರಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾರ್ತಾಂಡ ಬಿದ್ದ ಪರಿಣಾಮ ಚೆನ್ನೈ ಮೂಲದ ಪಲ್ಲಾವರಂ ನ ನಿವಾಸಿ ಜುನೆಸ್ಸಿ (33) ಮೃತಪಟ್ಟಿದ್ದರು. ಮೃತ ಮಹಿಳೆಯ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯ ಹಿನ್ನೆಲೆ ಪ್ರವಾಸಿತಾಣ ದುಬಾರೆಗೆ ಪ್ರವಾಸಿಗರ ಪ್ರವೇಶವನ್ನು ಎರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. ಅನಾಹುತಕ್ಕೆ ಕಾರಣನಾದ “ಕಂಜನ್” ನನ್ನು ಶಿಬಿರದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.









