
ಮಡಿಕೇರಿ ಆ.11 NEWS DESK : ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಎಲ್ಲರೂ ನೌಕರರಾಗಿದ್ದು, ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ವರ್ಚುವಲ್ ಮೂಲಕ ಮಂಗಳವಾರ ನಡೆದ ‘ಸರ್ಕಾರಿ ನೌಕರರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸಮಾಡುವುದು ಶಾಸಕಾಂಗ ಮತ್ತು ಕಾರ್ಯಾಂಗದ ನೌಕರರದ್ದಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಸ್ತಂಭವಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಸಲಹೆ ನೀಡಿದರು. ರಾಜ್ಯದ 7 ಕೋಟಿ ಜನರಲ್ಲಿ 5.50 ಲಕ್ಷ ಜನರಿಗೆ ಮಾತ್ರ ಸರ್ಕಾರಿನೌಕರರಿದ್ದು, ಆ ನಿಟ್ಟಿನಲ್ಲಿ ಜನರ ಸೇವೆ ಮಾಡಲು ಇದೊಂದು ಅವಕಾಶವಾಗಿದ್ದು, ಜವಾಬ್ದಾರಿಯಿಂದ ಜನಸಾಮಾನ್ಯರ ಕೆಲಸ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರು ತಾಕೀತು ಮಾಡಿದರು. ಆಡಳಿತ ವ್ಯವಸ್ಥೆಯಲ್ಲಿ ಹೊಸ ಹೊಸ ತಂತ್ರಜ್ಞಾನ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದೇಶಲ್ಲಿ ಕರ್ನಾಟಕ ಮುಂದಿದೆ, ರಾಜ್ಯದಲ್ಲಿ ಬುದ್ದಿವಂತರು ಮತ್ತು ಪ್ರಜ್ಞಾವಂತರು ಹೆಚ್ಚಿದ್ದು, ಎಲ್ಲರೂ ಸೇರಿ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ಅಧಿಕಾರ ಶಾಶ್ವಾತ ಅಲ್ಲ. ಆದರೆ ನಾವು ಮಾಡುವ ಕೆಲಸಕ್ಕೆ ಜವಾಬ್ದಾರಿ ಇರಬೇಕು. ಜನರ ಸೇವೆಗೆ ಸಿಕ್ಕಿರುವ ಒಂದು ಅವಕಾಶ ಎಂಬುದನ್ನು ಮರೆಯಬಾರದು ಎಂದು ಡಿ.ಕೆ.ಶಿವಕುಮಾರ ಅವರು ನುಡಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾ ತಾಲ್ಲೂಕು ಕೇಂದ್ರ ಸ್ಥಾನದಲ್ಲಿಯೇ ಇದ್ದು, ಕರ್ತವ್ಯ ನಿರ್ವಹಿಸಬೇಕು ಎಂದರು. ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರದ ಚಿಂತನೆ ಮತ್ತು ದೂರದದೃಷ್ಟಿಯ ಬಗ್ಗೆ ಅರಿತು ಕಾರ್ಯ ನಿರ್ವಹಿಸಬೇಕು. ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರು ಒತ್ತಿ ಹೇಳಿದರು. ಪ್ರಜಾಸೇವೆ ಕಾರ್ಯಕ್ರಮವನ್ನು ತಿಂಗಳ ಮೊದಲು ಮತ್ತು ಮೂರನೇ ಶನಿವಾರದಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಸಬೇಕು ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು. ಪಂಚ ಗ್ಯಾರೆಂಟಿ ಯೋಜನೆಯ ಜೊತೆಗೆ ಇ-ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಇದೊಂದು ಆರನೇ ಗ್ಯಾರೆಂಟಿ ಯೋಜನೆಯಾಗಿದೆ ಎಂದರು. ಸ್ಥಳೀಯವಾಗಿಯೇ ಸಾರ್ವಜನಿಕ ಸೇವೆ ಕಲ್ಪಿಸಿದಾಗ, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಸಾರ್ವಜನಿಕರು ಬರುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು. ಸರ್ಕಾರದ ಸೌಲಭ್ಯ ಪಡೆಯುವ ಪ್ರತಿ ಫಲಾನುಭವಿಗಳ ದಾಖಲೆ ತಮ್ಮ ಬಳಿ ಇರಬೇಕು. ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳು ಚಲನವಲನ ವಹಿ ಕಡ್ಡಾಯವಾಗಿ ನಿರ್ವಹಿಸಬೇಕು. ಖಾಸಗಿ ಸಂಸ್ಥೆಯವರು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಡಿ.ಕೆ.ಶಿಕುಮಾರ ಅವರು ಸಲಹೆ ಮಾಡಿದರು. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾತನಾಡಿ, ಜನರ ಬಳಿಗೆ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು, ಜನ ಸಮುದಾಯದ ಸಮಸ್ಯೆ ಆಲಿಸಬೇಕು. ಆ ನಿಟ್ಟಿನಲ್ಲಿ ಪ್ರಜಾಸೇವೆ ಇಲಾಖೆ ಆರಂಭಿಸಲಾಗಿದ್ದು, ಜನಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಸಬೇಕು ಎಂದರು. ರಾಜ್ಯದಲ್ಲಿ 164 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು, ಜನುವಾರುಗಳಿಗೆ ಮೇವು ಇತರೆ ಸೌಲಭ್ಯ ಒದಗಿಸಬೇಕು. ರೈತರ ಬೆಳೆಗೆ ವಿಮೆ ಮಾಡಿಸಬೇಕು. ಜನರು ವಲಸೆ ಹೋಗುವುದನ್ನು ತಪ್ಪಿಸಬೇಕು. ವಿಬಿಜಿ ರಾಮ್ ಜಿ ಯೋಜನೆ ಮೂಲಕ ಕೂಲಿ ಒದಗಿಸಬೇಕು ಎಂದರು. ರಾಜ್ಯದಲ್ಲಿ ಐದು ಸಾವಿರ ಮಳೆ ಮಾಪನ ಕೇಂದ್ರಗಳಿದ್ದು, ಇದರಲ್ಲಿ ಎರಡುವರೆ ಸಾವಿರ ಮಳೆ ಮಾಪನ ಕೇಂದ್ರ ಕೆಟ್ಟಿದ್ದು, ಇವುಗಳನ್ನು ಸರಿಪಡಿಸಬೇಕು ಎಂದರು. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಅಧಿಕಾರಿಗಳು ಉದಾಸಿನ ತೋರದೆ ಜನರ ವಿಶ್ವಾಸ ಪಡೆದು ಕರ್ತವ್ಯ ನಿರ್ವಹಿಸಬೇಕು. ಭಾರತ್ ಜೋಡೋ ಯುವ ಸಂಘವನ್ನು ತ್ವರಿತವಾಗಿ ಸ್ಥಾಪಿಸಬೇಕು ಎಂದರು. ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದರು, ಸಚಿವರಾದ ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನಿ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಉಮಾ ಮಹದೇವನ್, ಜಿಲ್ಲಾಧಿಕಾರಿ ಎಸ್.ಜೆ.ಸೋಮವಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಕೊಡಗುವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ತಹಶೀಲ್ದಾರರು, ವಿವಿಧ ಇಲಾಖಾ ಅಧಿಕಾರಿಗಳು ಇತರರು ಇದ್ದರು.










