
ಸುಳ್ಯ ಆ.13 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ, ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಘದ ಸಹಯೋಗದಲ್ಲಿ ‘ಆಟಿನ ನೆನಪು–ಸಂಪ್ರದಾಯದ ಮೆಲುಕು’ ಎಂಬ ಶೀರ್ಷಿಕೆಯಲ್ಲಿ ಆಟಿ ಆಚರಣೆ ನಡೆಯಿತು. ಕಾರ್ಯಕ್ರಮವನ್ನು ಎ.ಒ.ಎಲ್.ಐ. (ರಿ.) ಸುಳ್ಯದ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ದೀಪ ಬೆಳಗಿ ಹಾಗೂ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯ ನಡುವೆ ನಮ್ಮ ಮೂಲ ಸಂಸ್ಕೃತಿ ಮತ್ತು ಪರಂಪರೆ ಮರೆಯಾಗದಂತೆ ನೋಡಿಕೊಳ್ಳಬೇಕು. ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯ ಯುವಜನತೆಯಿಂದ ಆಗಬೇಕು. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು ಹಾಗೂ ಸಾಮಾಜಿಕ ಐಕ್ಯತೆಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಎನ್.ಎ. ಜ್ಞಾನೇಶ್ ಮಾತನಾಡಿ, ಆಟಿ ಕೇವಲ ಒಂದು ತಿಂಗಳ ಆಚರಣೆಯಲ್ಲ. ಅದು ನಮ್ಮ ಮಣ್ಣಿನ ಬದುಕು, ಆಹಾರ ಪದ್ಧತಿ, ಜನಪದ ಸಂಸ್ಕೃತಿ ಹಾಗೂ ಪ್ರಕೃತಿಯೊಂದಿಗಿನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಇಂತಹ ಆಚರಣೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಅರಿತುಕೊಳ್ಳಬೇಕು ಎಂದರು. ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಎನ್‌ಎಂಸಿ ಹಿರಿಯ ವಿದ್ಯಾರ್ಥಿನಿ ದೇವಜನ ಗೀತಾ ಮೋಂಟಡ್ಕ ಅವರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಆಟಿ ತಿಂಗಳ ಪ್ರತಿಯೊಂದು ಆಚರಣೆಯಲ್ಲೂ ಪೂರ್ವಜರ ಬದುಕಿನ ಜ್ಞಾನ ಅಡಗಿದೆ. ಜನಪದ ಕಲೆ, ಆಹಾರ, ಆಚರಣೆ ಮತ್ತು ನಂಬಿಕೆಗಳು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಭಾಗವಾಗಿದ್ದು, ಅವುಗಳನ್ನು ಕೇವಲ ನೆನಪಿಸಿಕೊಳ್ಳುವುದಷ್ಟೇ ಅಲ್ಲದೆ ಅರ್ಥಮಾಡಿಕೊಂಡು ಉಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಟಿ ಕಳೆಂಜ ಪ್ರದರ್ಶನ, ವಸ್ತು ಪ್ರದರ್ಶನ, ಆಟಿ ಆಹಾರ ಮೇಳ, ಚೆನ್ನೆಮಣೆ ಸ್ಪರ್ಧೆ, ಸೋಬಾನೆ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಚೆನ್ನೆಮಣೆ ಸ್ಪರ್ಧೆಗೆ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಚೆನ್ನೆಮಣೆ ಆಡುವ ಮೂಲಕ ಚಾಲನೆ ನೀಡಿದರು. ಜಯಪ್ರಕಾಶ್ ಕುಕ್ಕೆಟ್ಟಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪ್ರಾಂಶುಪಾಲ ಡಾ. ರುದ್ರತ್ಮಾರ್ ಎಂ.ಎಂ., ಅಕಾಡೆಮಿ ಸದಸ್ಯೆ ಲತಾ ಪ್ರಸಾದ್ ಕುದ್ರಾಜೆ, ಐಕ್ಯೂಎಸಿ ಸಂಚಾಲಕಿ ಡಾ. ಮಮತಾ ಕೆ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶಶ್ಮಿ ಭಟ್ ಹಾಗೂ ಕಾರ್ಯಕ್ರಮ ಸಂಘಟಕಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಉಪಸ್ಥಿತರಿದ್ದರು. ಆರಂಭದಲ್ಲಿ ಯುವ ರೆಡ್‌ಕ್ರಾಸ್ ಸದಸ್ಯರಾದ ಹವ್ಯಾ, ಧೃತಿ, ಕೃತಿ ಹಾಗೂ ಸೌಪರ್ಣಿಕಾ ಪ್ರಾರ್ಥಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕಿ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿದರು. ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಪ್ರೇಮಲತಾ ಎಂ. ವಂದಿಸಿದರು. ರೆಡ್‌ಕ್ರಾಸ್ ಸದಸ್ಯರಾದ ಪ್ರತೀಕ್ಷಾ ಹಾಗೂ ಮೋನಿಷಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗೀತಾ ಮೋಂಟಡ್ಕ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಂಪ್ರದಾಯಿಕ ಉಡುಪುಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸದಸ್ಯರು ಸಹಕರಿಸಿದರು.









