ಕುಶಾಲನಗರ, NEWS DESK ಆ. 30: ಮೈಸೂರಿನ ಸೇವಾ ಭಾರತಿ ಸಂಸ್ಥೆಯ ವತಿಯಿಂದ ನಿರಂತರ ಮಿತ್ರ ವೃಂದ ಹಾಗೂ ಭವಿಷ್ಯ ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಶಿಕ್ಷಣ ತಜ್ಞರೂ ಆದ ಶೈಕ್ಷಣಿಕ ಸಮಾಲೋಚಕ ಡಾ. ಜಿ. ಅಚ್ಯುತನ್ ಅವರು, ಸಂಪನ್ಮೂಲಗಳ ಕೊರತೆಯಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಹಾಗೂ ಅವರ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ನೋಟ್ ಪುಸ್ತಕಗಳ ವಿತರಣೆ ಅತ್ಯುತ್ತಮ ಮತ್ತು ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಈ ಸಾಮಾಜಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಹಲವಾರು ದಾನಿಗಳು ಸಹಕರಿಸಿದ್ದಾರೆ ಎಂದರು.
ಸಮಾಜ ಸೇವೆಯ ಒಂದು ಭಾಗವಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಬರವಣಿಗೆ ಪುಸ್ತಕಗಳು, ಪೆನ್, ಪೆನ್ಸಿಲ್, ಬ್ಯಾಗ್ ಸೇರಿದಂತೆ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ನೀಡಲಾಗುತ್ತಿದೆ ಎಂದರು.
“ಶಿಕ್ಷಣವೇ ದೇಶದ ಭವಿಷ್ಯ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಬೇಕು,” ಎಂದು ಡಾ. ಅಚ್ಯುತನ್ ಕರೆ ನೀಡಿದರು.
ನಿರಂತರ ಫೌಂಡೇಶನ್‌ನ ಪ್ರಮುಖರಾದ ಸಿ.ಎಸ್. ವೆಂಕಟೇಶ್ ಬಾಬು ಹಾಗೂ ರಾಧಾ ವೆಂಕಟೇಶ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಕುರಿತು ಮಾತನಾಡಿದರು.
ಕೂಡಮಂಗಳೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಪೆರುಮಾಳ್ ಮಾತನಾಡಿ, ದಾನಿಗಳು ಮಕ್ಕಳಿಗೆ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆಯಲ್ಲಿ ತೊಡಗಬೇಕು ಎಂದರು.
ಬಿ.ಆರ್.ಸಿ. ಎಂ.ವಿ. ಮಂಜೇಶ್ ಹಾಗೂ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ. ನವೀನ್ ಕುಮಾರ್, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಟಿ.ವಿ. ಶೈಲಾ ಕಾರ್ಯಕ್ರಮ ನಿರ್ವಹಿಸಿದರು.







