ಚೆಟ್ಟಳ್ಳಿ, NEWS DESK ಆ.30: ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾಫಿ, ಕರಿಮೆಣಸು, ಭತ್ತ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದ್ದು, ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು, ಕುಶಾಲನಗರ ಪ್ರದೇಶದಲ್ಲಿ ಬರದ ಪರಿಸ್ಥಿತಿ ಇದ್ದರೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ವಿಷಾದನೀಯ ಎಂದರು. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸಂಘದ ವತಿಯಿಂದ ಸರ್ಕಾರಕ್ಕೆ ಪತ್ರ ಬರೆದು ಕುಶಾಲನಗರ ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಲು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಸಹಕಾರ ಸಂಘಗಳ ಆಡಳಿತ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಗಳ ಮಾದರಿಯಲ್ಲಿ ರೂಪಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಮಣಿ ಉತ್ತಪ್ಪ ಹೇಳಿದರು. ಹಿಂದಿನ ಸರ್ಕಾರಗಳು ರೈತರ ಕೃಷಿ ಸಾಲ ಮನ್ನಾ, ಬಡ್ಡಿ ಮನ್ನಾ ಸೇರಿದಂತೆ ವಿವಿಧ ಪರಿಹಾರಗಳನ್ನು ನೀಡುತ್ತಿದ್ದವು. ಆದರೆ ಪ್ರಸಕ್ತ ಸರ್ಕಾರ ರೈತರಿಗೆ ಯಾವುದೇ ಸಾಲಮನ್ನಾ ಅಥವಾ ಪರಿಹಾರ ಘೋಷಿಸದಿರುವುದು ಬೇಸರದ ಸಂಗತಿ ಎಂದರು.
ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದಗೆಟ್ಟಿದ್ದರೂ ಸಮರ್ಪಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಆರ್‌ಟಿಸಿಯಲ್ಲಿ ಒಂದೇ ಕುಟುಂಬದ ಸದಸ್ಯರ ಜಂಟಿ ಹೆಸರುಗಳಿರುವುದರಿಂದ ಕೃಷಿ ಸಾಲ ಪಡೆಯಲು ರೈತರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಂಡು, ಹಿಂದೆ ಸಹಕಾರ ಸಂಘಗಳ ಮೂಲಕ ಕೃಷಿಕರಿಗೆ ಸಾಲ ನೀಡುತ್ತಿದ್ದ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್
ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದ ಸಭಾಂಗಣದಲ್ಲಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಆರ್ಥಿಕ ಸ್ಥಿತಿಗತಿ ಕುರಿತು ಮಾಹಿತಿ ನೀಡಲಾಯಿತು. ಸಂಘಕ್ಕೆ ಸುಮಾರು ರೂ.1.20 ಕೋಟಿ ಲಾಭವಿದ್ದರೂ ಸರ್ಕಾರದಿಂದ ಬರಬೇಕಾದ ಹಣ ಬಾಕಿ ಇರುವ ಹಿನ್ನೆಲೆಯಲ್ಲಿ ರೂ.75.34 ಲಕ್ಷ ಲಾಭಾಂಶ ತೋರಿಸಲಾಗಿದೆ. ಈ ಬಾರಿ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಹಾಗೂ ರೂ.700 ಸಭಾ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.
1976-77ರಲ್ಲಿ ನೋಂದಣಿಗೊಂಡಿರುವ ಸಂಘ ಮುಂದಿನ ವರ್ಷ 50ನೇ ವರ್ಷಕ್ಕೆ ಕಾಲಿಡಲಿದ್ದು, ಈ ಹಿನ್ನೆಲೆಯಲ್ಲಿ 50ನೇ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಿ ಸಂಘದ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಮುಖ್ಯ ಕಚೇರಿ ಹಾಗೂ ಈರಳೆ ಶಾಖೆಯ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಈರಳೆ ಶಾಖೆಯ ಹಳೆಯ ಗೋದಾಮಿನ ದುರಸ್ತಿ ಕಾರ್ಯಕ್ಕೆ ಮಹಾಸಭೆಯ ಅನುಮತಿ ಪಡೆಯಲಾಗಿದೆ. ಸಂಘದಲ್ಲಿ ನೂತನ ತಂತ್ರಜ್ಞಾನ ಅಳವಡಿಸುವ ಉದ್ದೇಶದಿಂದ ಕಾಮನ್ ಸಾಫ್ಟ್‌ವೇರ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಮಣಿ ಉತ್ತಪ್ಪ ಹೇಳಿದರು.
ನಿವೃತ್ತ ವಾಯುಪಡೆ ಯೋಧರಿಗೆ ಸನ್ಮಾನ
ಸಂಘದ ಅಭಿವೃದ್ಧಿಗೆ ರೂ.1 ಲಕ್ಷ ದೇಣಿಗೆ ನೀಡಿದ ನಿವೃತ್ತ ವಾಯುಪಡೆ ಯೋಧ ಪುತ್ತರಿರ ಗಣೇಶ್ ಭೀಮಯ್ಯ ಹಾಗೂ ಅವರ ಪತ್ನಿ ಪ್ರೇಮಾ ಭೀಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರ ಪುತ್ತರಿರ ಸುದೀರ್ ಗಣಪತಿ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಭೀಮಯ್ಯ, ಸಂಘದ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಐನ್‌ಮನೆ, ಕೈಮಡ ಹಾಗೂ ದೇವಾಲಯಗಳಿಗೆ ದೇಣಿಗೆ ನೀಡುತ್ತಿರುವ ಸಂಘದ ಕಾರ್ಯವನ್ನು ಅಭಿನಂದಿಸಿದ ಅವರು, ಸ್ಥಳೀಯ ಮಾಜಿ ಯೋಧರನ್ನು ಸನ್ಮಾನಿಸುವ ಮೂಲಕ ಸಂಘವು ಇಡೀ ದೇಶದ ಯೋಧರಿಗೆ ಗೌರವ ಸಲ್ಲಿಸುತ್ತಿದೆ ಎಂದರು.
ಆಂತರಿಕ ಲೆಕ್ಕಪರಿಶೋಧಕ ಚಂದ್ರಶೇಖರ್ ಮಾತನಾಡಿ, ಒಂದು ಕಾಲದಲ್ಲಿ ರೂ.4 ಲಕ್ಷ ಸಾಲದ ಸ್ಥಿತಿಯಲ್ಲಿದ್ದ ಸಂಘ ಇಂದು ಅಭಿವೃದ್ಧಿಯತ್ತ ಸಾಗಿದ್ದು, ಉತ್ತಮ ಲಾಭಾಂಶ ಗಳಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ರೈತರ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದಿನಿ ಪ್ರಾರ್ಥಿಸಿದರು. ನಿರ್ದೇಶಕ ಅಕ್ಕಾರಿ ದಯಾನಂದ ವಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪೇರಿಯನ ಪೂರ್ಣಚ್ಚ, ನಿರ್ದೇಶಕರಾದ ಕೊಂಗೇಟಿರ ವಾಣಿಕಾಳಪ್ಪ, ಬಿ.ಎಂ. ಕಾಶಿ, ಪುತ್ತರಿರ ಶಿವು ನಂಜಪ್ಪ, ಮುಳ್ಳಂಡ ಮಾಯಮ್ಮ, ಅಕ್ಕಾರಿ ದಯಾನಂದ, ಬಟ್ಟೀರ ವೇಣುಗೋಪಾಲ, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ್, ಗಣೇಶ್ ಪಿ.ಟಿ., ರವಿ ಜೆ.ಆರ್., ಸಹಕಾರ ಸಂಘಗಳ ಮೇಲ್ವಿಚಾರಕಿ ಮಮತ ಎಂ.ಈ., ಪರಿಣತ ನಿರ್ದೇಶಕರಾದ ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ ಹಾಗೂ ಆಂತರಿಕ ಲೆಕ್ಕಪರಿಶೋಧಕ ಚಂದ್ರಶೇಖರ್ ಉಪಸ್ಥಿತರಿದ್ದರು.








