ಸುಂಟಿಕೊಪ್ಪ, NEWS DESK ಸೆ.17: ಸುಂಟಿಕೊಪ್ಪದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ 2ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಯ ವಿಸರ್ಜನೋತ್ಸವ ಬುಧವಾರ ಅದ್ಧೂರಿಯಾಗಿ ನಡೆಯಿತು.
ಪಂಪ್ ಹೌಸ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ ವತಿಯಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಮಹಾಪೂಜೆ ಹಾಗೂ ವಿವಿಧ ಪೂಜಾ ಕೈಂಕರ್ಯಗಳ ಬಳಿಕ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಹೆಚ್.ಡಿ.ಕೋಟೆಯ ನಗಾರು ಹಾಗೂ ಡಿಜೆ ಸಂಗೀತದೊಂದಿಗೆ ಪಂಪ್ ಹೌಸ್ ರಸ್ತೆಯಿಂದ ಅಯ್ಯಪ್ಪ ದೇವಾಲಯದವರೆಗೆ, ಅಲ್ಲಿಂದ ಮಾದಾಪುರ ರಸ್ತೆಯ ವೃಕ್ಷೋದ್ಭವ ಗಣಪತಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಬಳಿಕ ಹರದೂರು ಹೊಳೆಯಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.
ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವೂ ಬುಧವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಕೊಡಗರಹಳ್ಳಿಯಲ್ಲಿ ಶೋಭಾಯಾತ್ರೆ:
ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಂಘದ 8ನೇ ವರ್ಷದ ಗೌರಿ ಗಣೇಶೋತ್ಸವದ ವಿಸರ್ಜನೋತ್ಸವವು ಬುಧವಾರ ಸಂಜೆ ನಡೆಯಿತು. ವಿವಿಧ ಪೂಜಾ ಕೈಂಕರ್ಯಗಳ ಬಳಿಕ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆ ನಡೆಯಿತು. ಕೊಡಗರಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ರಾತ್ರಿ ಸ್ಥಳೀಯ ಕೆರೆಯಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು. ಸುತ್ತಮುತ್ತಲಿನ ನೂರಾರು ಮಂದಿ ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದರು.
ಮುಸ್ಲಿಂ ಕುಟುಂಬದಿಂದ ಸೌಹಾರ್ದತೆ:
ಕೊಡಗರಹಳ್ಳಿಯ ಬೈತೂರಪ್ಪ ದೇವಾಲಯದ ಬಳಿಯ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವದ ಸಂದರ್ಭದಲ್ಲಿ ಸ್ಥಳೀಯ ರಫೀಕ್ ಮತ್ತು ಇಬ್ರಾಹಿಂ ಕುಟುಂಬಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡ ಹಿಂದೂಗಳಿಗೆ ಸಿಹಿ ಹಾಗೂ ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ವಿಸರ್ಜನೆ:
ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗೆ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಸಂಜೆ ಹರದೂರು ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಎಮ್ಮೆಗುಂಡಿಯಲ್ಲಿ ಮೆರವಣಿಗೆ:
ಎಮ್ಮೆಗುಂಡಿಯ ಬಾಲಗಣಪತಿ ಮಿತ್ರ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಎರಡನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನ ಮೆರವಣಿಗೆಯು ಎಮ್ಮೆಗುಂಡಿಯಿಂದ ಸುಂಟಿಕೊಪ್ಪ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬಳಿಕ ಎಮ್ಮೆಗುಂಡಿಗೆ ಹಿಂತಿರುಗಿ ಸ್ಥಳೀಯ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.







