ಮಡಿಕೇರಿ ಫೆ.3: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 36ನೇ ವರ್ಷದ ಶಾಲಾ ವಾರ್ಷಿಕೋತ್ಸವವು ವಿದ್ಯಾಲಯದಲ್ಲಿ ಸಂಭ್ರಮದಿಂದ ನಡೆಯಿತು. ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ, ಜಿಲ್ಲೆಯ ಹಿರಿಯ ಲೇಖಕ ಕಿಗ್ಗಾಲು ಗಿರೀಶ್, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಅರ್ಜುನ್ ಸಿಂಗ್ ಹಾಗೂ ನವೋದಯ ವಿದ್ಯಾಲಯದ ಪ್ರಾಚಾರ್ಯ ಪಿ.ಒ.ಪಂಕಜಾಕ್ಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ ಪಿ.ಒ.ಪಂಕಜಾಕ್ಷನ್ ಶೈಕ್ಷಣಿಕ ಸಾಲಿನಲ್ಲಿ ನಡೆದ ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮತ್ತು ವಿಶೇಷ ಸಾಧನೆಗಳ ವಿವರಗಳನ್ನೊಳಗೊಂಡ ವರದಿ ಮಂಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ವಲಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಳೆದ ಸಾಲಿನಲ್ಲಿ ಸಿಬಿಎಸ್‍ಇ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನರಂಜನ ಕಾರ್ಯಕ್ರಮ ನಡೆದವು. ಶಿಕ್ಷಣದಲ್ಲಿ ಕಲೆ ಎಂಬ ಪರಿಕಲ್ಪನೆಯನ್ನು ಆಧರಿಸಿ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಚಿತವಾದ ಕೊಡವ ನೃತ್ಯರೂಪಕವು ಪ್ರದರ್ಶಿತಗೊಂಡವು. ಈ ನೃತ್ಯ ರೂಪಕ್ಕೆ ಒಂದು ತಿಂಗಳು ತರಬೇತಿ…
ಲೇಖಕ: admin
ಮಡಿಕೇರಿ ಫೆ.3 : ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಜಿಲ್ಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಟ್ಯಾಬ್ ವಿತರಿಸಿದರು. ಶಾಸಕ ಕೆ.ಜಿ.ಬೋಪಯ್ಯ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಇರುವ ಶಾಸಕರ ಕಚೇರಿಯಲ್ಲಿ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಿಲ್ಲಾ ಪಂಚಾಯತ್‍ನ ಶಾಸಕರ ಕಚೇರಿ ಆವರಣದಲ್ಲಿ ವಿತರಿಸಿದರು. ಮಡಿಕೇರಿ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಒಟ್ಟು 50 ಟ್ಯಾಬ್‍ಗಳನ್ನು ಶಾಸಕದ್ವಯರು ವಿತರಿಸಿದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬದ ಮಕ್ಕಳಿಗೆ ಟ್ಯಾಬ್‍ನ್ನು ವಿತರಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಪಡೆದುಕೊಂಡು ಉನ್ನತ ಶಿಕ್ಷಣ ಪಡೆಯುವಂತೆ ಸಲಹೆ ಮಾಡಿದರು. ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಇತರರು ಇದ್ದರು.
ಮಡಿಕೇರಿ ಫೆ.3 : ತಾಲ್ಲೂಕಿನ ಮರಗೋಡು ಗ್ರಾಮದ ನಿವಾಸಿ ಪಿ.ಜಿ.ರುಕ್ಮಿಣಿ (70) ಎಂಬುವವರು ಫೆ.1 ರಿಂದ ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎತ್ತರ 5 ಅಡಿ, ಕಪ್ಪು ಬಟ್ಟೆಯಲ್ಲಿ ಬಿಳಿ ಹೂಗಳಿರುವ ನೈಟಿ, ಕಾಲಿಗೆ ಗಂಬೂಟು ಹಾಕಿದ್ದಾರೆ. ಅರೆಗನ್ನಡ ಮತ್ತು ಕನ್ನಡ ಮಾತನಾಡುತ್ತಾರೆ. ಗೋಧಿ ಬಣ್ಣ, ತೆಳ್ಳಗಿನ ಶರೀರ, ಗೌಡ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಉಪನಿರೀಕ್ಷಕರು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ 08272-228777 ಅಥವಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ 08272- 229000 ನ್ನು ಸಂಪರ್ಕಿಸಬಹುದೆAದು ಪೊಲೀಸ್ ಪ್ರಕಟಣೆ ಕೋರಿದೆ.
ಮಡಿಕೇರಿ ಫೆ.3 : ವರ್ತಕರೊಬ್ಬರ ಮೊಬೈಲ್ ಫೋನ್ ಮೂಲಕ ಫೋನ್ ಪೇ ಮತ್ತು ಗೂಗಲ್ ಪೇ ಆಪ್ ನ್ನು ಬಳಸಿ ರೂ.4,76,456 ನ್ನು ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿಕೊಂಡ ಆರೋಪದಡಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಸಮೀಪ ಗುಡ್ಡೆಹೊಸೂರುವಿನ ಬೊಳ್ಳೂರು ಗ್ರಾಮದ ನಿವಾಸಿ ನೂತನ್ ಬಿ.ಎಂ (23) ಬಂಧಿತ ಆರೋಪಿ. ಗುಮ್ಮನಕೊಲ್ಲಿಯ ದಿನಸಿ ಅಂಗಡಿಯ ವರ್ತಕರೊಬ್ಬರ ಪುತ್ರಿ ಅನುಷಾ ಎಂಬುವವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷ ರಾಘವೇಂದ್ರ ಜೆ.ಕೆ ಹಾಗೂ ಪೊಲೀಸ್ ಉಪ ನಿರೀಕ್ಷಕ ದೇವರಾಜ್ ಹೆಚ್.ಇ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರು ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದಿರಲು ಕೊಡಗು ಜಿಲ್ಲಾ ಸೈಬರ್ ಅಪರಾಧ ವಿಭಾಗ ಮನವಿ ಮಾಡಿದೆ.
ಮಡಿಕೇರಿ ಫೆ.3 : ದಕ್ಷಿಣ ಕೊಡಗಿನಲ್ಲಿ ಹುಲಿ ಆತಂಕ ಮುಂದುವರೆದಿದ್ದು, ಸಾಲು ಸಾಲು ಜಾನುವಾರುಗಳು ಬಲಿಯಾಗುತ್ತಿವೆ. ತೂಚಮಕೇರಿ ಗ್ರಾಮದ ಪುಟ್ಟಂಗಡ ಚೇತನ್ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. 15 ದಿನಗಳ ಹಿಂದೆಯಷ್ಟೆ ಬಲ್ಯಮಂಡೂರು ಗ್ರಾಮದ ಚೇಂದಿರ ಸುರೇಶ್ ಅವರ ಎಮ್ಮೆಯನ್ನು ಹುಲಿ ಬಲಿ ಪಡೆದಿತ್ತು. ಕಳೆದ ವರ್ಷ ಕೂಡ ಚೇತನ್ ಅವರಿಗೆ ಸೇರಿದ ಹಸುವೊಂದನ್ನು ಹುಲಿ ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಉಪಟಳ ನಿರಂತರವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಹುಲಿ ಸೆರೆಗೆ ಬೋನ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಹಸುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದರು. ಮಾಯಮುಡಿಯ ರುದ್ರಬೀಡು ಎಂಬಲ್ಲಿ ಮತ್ತೊಂದು ಹಸುವನ್ನು ಹುಲಿ ಕೊಂದು ಹಾಕಿದೆ. ದಕ್ಷಿಣ ಕೊಡಗಿನ ಹುಲಿ ಉಪಟಳದ ಭಾಗಗಳಲ್ಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಬೆಳೆಗಾರರು ಅತಂತ್ರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಮಡಿಕೇರಿ ಫೆ.3 : ಪದ್ಮಶ್ರೀ ಪುರಸ್ಕೃತ ಕೊಡಗಿನ ಉಮ್ಮತ್ತಾಟ್ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ರಾಣಿ ಮಾಚಯ್ಯ ಅವರನ್ನು ನಗರದ ಎವಿ ಶಾಲೆ ಬಳಿಯಿಂದ ತೆರೆದ ಜೀಪ್‍ನಲ್ಲಿ ಮೆರವಣಿಗೆ ಮೂಲಕ ಕರೆ ತಂದು ಕೊಡವ ಸಮಾಜದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಹಾಗೂ ನಿರ್ದೇಶಕಿ ಕಾಂಡೇರ ಲಲ್ಲು ಕುಟ್ಟಪ್ಪ ಸೇರಿದಂತೆ ಕೊಡವ ಸಮಾಜದ ಅಧೀನದಲ್ಲಿರುವ 12 ಕೇರಿಗಳ ಸದಸ್ಯರು, ಪೊಮ್ಮಕ್ಕಡ ಕೂಟದ ಪ್ರಮುಖರು, ಜನಾಂಗ ಬಾಂಧವರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಮಡಿಕೇರಿ ಫೆ.3 : ಕೊಡಗು ಆಮ್ ಆದ್ಮಿ ಪಕ್ಷದ ಸಭೆಯು ಫೆ.4 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೋಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಎಎಪಿ ಪಕ್ಷದ ರಾಜ್ಯ ನಾಯಕರುಗಳಾದ ಬಿ. ಟಿ. ನಾಗಣ್ಣ ಮತ್ತು ಚೆನ್ನಪ್ಪ ಗೌಡ ಸಭೆಗೆ ಆಗಮಿಸಲಿದ್ದಾರೆ. ಅಲ್ಲದೆ ಸಭೆಯಲ್ಲಿ ಪಕ್ಷಕ್ಕೆ ನೂತನ ಕಾರ್ಯಕರ್ತರು ಸೇರ್ಪಡೆಯಾಗಲಿದ್ದು, ಪಕ್ಷಕ್ಕೆ ಸೇರಲು ಇಚ್ಛೆ ಇರುವ ಸಾರ್ವಜನಿಕರು ಆಗಮಿಸುವಂತೆ ಭೋಜಣ್ಣ ತಿಳಿಸಿದರು. ವಿಧಾನ ಸಭಾ ಚುನಾವಣೆ ಸಮೀಪ ಇರುವುದರಿಂದ ಪಕ್ಷದ ಮುಖಂಡರು,ಹಿತೈಷಿಗಳು,ಅಭಿಮಾನಿಗಳು, ಬೆಂಬಲಿಗರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವಂತೆ ಕೋರಿದರು.
ಮಡಿಕೇರಿ ಫೆ.3 : ಭಾರತೀಯ ನೌಕಾಪಡೆಯಲ್ಲಿ ರಿಯಲ್ ಅಡ್ಮಿರಲ್ ಆಗಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿ ಐಚೆಟ್ಟಿರ ಬಿ.ಉತ್ತಯ್ಯ ಅವರು ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿಗೆ ನಿಯೋಜಿತರಾಗಿದ್ದಾರೆ. ಐ.ಬಿ.ಉತ್ತಯ್ಯ (ವಿ.ಎಸ್.ಎಂ, ಎ.ವಿ.ಎಸ್.ಎಂ) ಅವರು ಇದೀಗ ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ನವದೆಹಲಿ ಇದರ ಮಹಾನಿರ್ದೇಶಕ (ಡಿ.ಜಿ.)ರಾಗಿ ನೇಮಕಗೊಂಡಿದ್ದಾರೆ. ಕಳೆದ ಹಲವು ಸಮಯದಿಂದ ವಿಶಾಖಪಟ್ಟಣದ ನೌಕಾನೆಲೆಯಲ್ಲಿ ರಿಯಲ್ ಅಡ್ಮಿರಲ್ ಸ್ಥಾನದೊಂದಿಗೆ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಇದೀಗ ರಿಯಲ್ ಅಡ್ಮಿರಲ್ ಬಿಮಲ್ ಕುಮಾರನ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಉತ್ತಯ್ಯ ಅವರು ಭಾರತೀಯ ನೌಕಾಪಡೆಗೆ 1987ರಲ್ಲಿ ಸೇರ್ಪಡೆಗೊಂಡಿದ್ದು, ಲೋನಾವರದ ಐ.ಎನ್.ಎಸ್.ಶಿವಾಜಿ ನೌಕಾ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಎಂ.ಟೆಕ್, ಎಂಪಿಲ್ ಪದವಿ ಪಡೆದಿದ್ದಾರೆ. ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಉತ್ತಯ್ಯ ಅವರು, ಕಾರವಾರದ ನೌಕಾನೆಲೆಯ ತಾಂತ್ರಿಕ ಹೆಚ್ಚುವರಿ ಮಹಾ ನಿರ್ದೇಶಕರಾಗಿ, ವಿಶಾಖಪಟ್ಟಣದ ನೌಕಾನೆಲೆಯ ಎಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ಪೂರ್ವ ನೌಕಾನೆಲೆಯ ಮುಖ್ಯ ಅಧಿಕಾರಿಯಾಗಿ…
ಸೋಮವಾರಪೇಟೆ ಫೆ.3 : ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಪ್ರಯೋಗಾಲಯಕ್ಕೆ ಪಾರ್ವತಿ ಗ್ಯಾಸ್ ಏಜೆನ್ಸಿಯ ಮಾಲೀಕ ಎಸ್.ಎ.ಮುರಳೀಧರ್ ಉದಾರವಾಗಿ ಗ್ಯಾಸ್ ಸಿಲಿಂಡರ್ ನೀಡಿದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮುಖ್ಯ ಶಿಕ್ಷಕ ಯಶ್ವಂತ್‍ಕುಮಾರ್, ಸಹ ಶಿಕ್ಷಕರು ಹಾಜರಿದ್ದರು.
ಸೋಮವಾರಪೇಟೆ ಫೆ.3 : ತಾಲ್ಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಮೂವರು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಐಗೂರು ಸರಕಾರಿ ಪ್ರೌಢಶಾಲೆಯ ಸ್ನೇಹಾ, ನೆಲ್ಲಿಹುದಿಕೇರಿ ಪ್ರೌಢಶಾಲೆಯ ಅಸ್ಮಿಯಾ, ಅಂಕನಳ್ಳಿ ಪ್ರೌಢಶಾಲೆಯ ಅಭಿಷೇಕ್ ಅವರುಗಳಿಗೆ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ತಹಶೀಲ್ದಾರ್ ಎಸ್.ಎನ್.ನರಗುಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ರಾಷ್ಟ್ರೀಯ ಹಬ್ಬಗಳ ಸಮಿತಿ ಉಪಾಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಇದ್ದರು.






