ಮಡಿಕೇರಿ ಜ.3 : ವಿದ್ಯಾರ್ಥಿಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು ಉತ್ತಮ ಭವಿಷ್ಯಕ್ಕೆ ಗ್ರಾಮದಲ್ಲಿರುವ ಅಂಗನವಾಡಿಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವ ಗ್ರಂಥಾಲಯವನ್ನಾಗಿ ಮಾರ್ಪಾಡು ಮಾಡಬೇಕು ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆಯ ಉಮಾ ಮಹಾದೇವನ್ ಅಭಿಪ್ರಾಯಪಟ್ಟರು.
ಹೊದ್ದೂರು ಗ್ರಾ.ಪಂ ಮತ್ತು ಪಂಚಾಯಿತಿ ವ್ಯಾಪ್ತಿಯ ಕಬಡಕೇರಿ ಮತ್ತು ಕಾನ್ಸಿರಾಂಜೀ ನಗರ ಪಾಲೆಮಾಡಿನ ಸಾವಿತ್ರಿ ಬಾಯಿ ಫುಲೆ ಗ್ರಂಥಾಲಯಕ್ಕೆ ಭೇಟಿ ನೀಡಿದ ಉಮಾ ಮಹಾದೇವನ್ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಪ್ರಸಂಶಿಸಿದರು.
ಬಳಿಕ ಮಾತನಾಡಿದ ಅವರು ಗ್ರಂಥಾಲಯಗಳಲ್ಲಿ ದೇಶದ ಗಣ್ಯ ವ್ಯಕ್ತಿಗಳು, ಗ್ರಾಮೀಣ ಮಟ್ಟದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮತ್ತು ಗ್ರಾಮೀಣ ಮಟ್ಟದ ಸಾಧಕರ ಭಾವಚಿತ್ರಗಳನ್ನು ಅಳವಡಿಸಬೇಕು. ಇದರಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬೆಳೆಯುತ್ತಾರೆ. ದೇಶದ ಅಭಿವೃದ್ಧಿ ಎಂದರೆ ಇಂದಿನ ವಿದ್ಯಾರ್ಥಿಗಳನ್ನು ಭವಿಷ್ಯ ಭಾರತಕ್ಕೆ ಉತ್ತಮ ಪ್ರಜೆಗಳನ್ನಾಗಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುವಂತೆ ಮಕ್ಕಳಿಗೆ ಉತ್ತಮ ಬೋಧಕರನ್ನು ಒದಗಿಸಬೇಕು ಮತ್ತು ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು. ಆಗ ನಿಜವಾದ ಭವಿಷ್ಯ ಭಾರತವನ್ನು ಕಾಣಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಮಕ್ಕಳೊಂದಿಗೆ ಕುಶಲೋಪರಿ ವಿಚಾರಿಸಿ ಓದುವಿನೊಂದಿಗೆ ಇನ್ನಿತರ ಕೌಶಲ್ಯಗಳನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಹೊದ್ದೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾವತಿ ಆನಂದ್, ಅಭಿವೃದ್ಧಿ ಅಧಿಕಾರಿ ಎ.ಎ.ಅಬ್ದುಲ್, ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧಕ ಪ್ರೀತಂ ಪೆÇನ್ನಪ್ಪ, ನಗರದ ಸ್ಥಾಪಕಾಧ್ಯಕ್ಷರು ಮತ್ತು ಹೊದ್ದೂರು ಗ್ರಾ.ಪಂ ಪ್ರತಿನಿಧಿ ಕೆ.ಮೊಣ್ಣಪ್ಪ, ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ನಗರದ ಸಾವಿತ್ರಿಬಾಯಿ ಫುಲೆ ಗ್ರಂಥಾಲಯ ಪಾಲಕ ಧನಂಜಯ್, ಹೊದ್ದೂರು ಗ್ರಾ.ಪಂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಎಂ. ರಂಜಿತ್ ಮೌರ್ಯ