ಮಡಿಕೇರಿ ಜ.11 : ಮಡಿಕೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದಕ್ಕೆ ನಗರಸಭೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವೆಂದು ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಬಿ.ವೈ.ರಾಜೇಶ್ ಆರೋಪಿಸಿದ್ದಾರೆ.
ಕೂಟುಹೊಳೆಯ ಸ್ಥಿತಿಗತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಜನವರಿ ತಿಂಗಳಾಯಿತ್ತೆಂದರೆ ಕೂಟುಹೊಳೆಯಲ್ಲಿ ನೀರಿನ ಕೊರತೆ ಎದುರಾಗುವುದು ಸಾಮಾನ್ಯ. ಇದರ ಅರಿವಿದ್ದರೂ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶದಿಂದ ನೀರು ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ನಗರಸಭೆಯ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಜನವರಿಯ ನಂತರ ನೀರಿನ ಅಭಾವ ನಗರವನ್ನು ಕಾಡುತ್ತದೆ ಎನ್ನುವ ಕಾರಣಕ್ಕಾಗಿ ಕೋಟ್ಯಾಂತರ ಹಣವನ್ನು ವಿನಿಯೋಗಿಸಿ ಕುಂಡಾಮೇಸ್ತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಇದರ ಲಾಭವನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸ್ತುತ ವರ್ಷದ ಆರಂಭದಿಂದಲೇ ಕೂಟುಹೊಳೆಯ ನೀರು ಕ್ಷೀಣಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಭಾಗಕ್ಕೆ ಬೇಡಿಕೆಗೆ ಅನುಗುಣವಾಗಿ ನೀರು ಸರಬರಾಜಾಗುತ್ತಿಲ್ಲ.
ದಿನದಲ್ಲಿ 15 ರಿಂದ 30 ನಿಮಿಷವಷ್ಟೇ ನೀರು ಬಿಡಲಾಗುತ್ತಿದ್ದು, ಹಲವು ಮನೆಗಳ ಮೇಲಿನ ಟ್ಯಾಂಕ್ ಗಳಿಗೆ ನೀರು ಹರಿಯುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೂಟುಹೊಳೆಯ ನೀರು ಸಂಪೂರ್ಣವಾಗಿ ಖಾಲಿಯಾಗುವ ಆತಂಕವಿದೆ. ಆದರೂ ನಗರಸಭೆಯ ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕುಂಡಾಮೇಸ್ತ್ರಿ ಯೋಜನೆಯ ಮೂಲಕ ನೀರು ಹರಿಸಿ ಶೇಖರಣೆ ಮಾಡುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ರಾಜೇಶ್ ಆರೋಪಿಸಿದರು.
ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿ ಪ್ರದೇಶದಲ್ಲಿ ತಾಂತ್ರಿಕ ಅಡಚಣೆಗಳಿದ್ದು, ಇದನ್ನು ಸರಿಪಡಿಸುವ ಕಾರ್ಯಕ್ಕೆ ತುರ್ತಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮಡಿಕೇರಿ ನಗರದ ಜನ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಗಮನ ಸೆಳೆದ ಅವರು, ನಗರಸಭಾ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಎರಡೂ ನೀರು ಸಂಗ್ರಹ ಕೇಂದ್ರಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.