ಮಡಿಕೇರಿ,ಜ. 12 : ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಆಟ ಶೇ.100ರಷ್ಟು ಏಳಿಗೆ ಕಂಡಿದೆ. ಕೊಡಗು ಜಿಲ್ಲೆಯಿಂದ ಹಲವಾರು ಮಂದಿ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕಾಗಿ ಆಡಿದ್ದಾರೆ ಎಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ ಹಾಗೂ ಎಂಸಿಸಿ ಹಿರಿಯ ಆಟಗಾರ ಬೆಪ್ಪುರನ ಅಣ್ಣಪ್ಪ ಹೇಳಿದರು.
ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂಸಿಸಿ) ವತಿಯಿಂದ ಇಲ್ಲಿನ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಫುಟ್ಬಾಲ್ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. 1968ರಲ್ಲಿ ಆರಂಭಗೊಂಡ ಎಂಸಿಸಿ ಕ್ಲಬ್ೆಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ. 5-7 ಆಟಗಾರರ ಪಂದ್ಯಾವಳಿಯೊಂದಿಗೆ ಪೂರ್ಣ ಪ್ರಮಾಣದ 11 ಆಟಗಾರರ 45 ನಿಮಿಷಗಳ ಪಂದ್ಯಾವಳಿ ಆಯೋಜಿಸುವಂತಾಗಬೇಕು. ಪ್ರತಿದಿನ ಅಭ್ಯಾಸ ಮಾಡಿದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ. ಆಟಗಾರರು ಕೊಡಗು ಮಾತ್ರವಲ್ಲದೆ, ಮೈಸೂರ, ಬೆಂಗಳೂರು ಸೇರಿದಂತೆ ಹೊಗಡೆ ಆಡಿದಾಗ ರಾಜ್ಯ, ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆ ಸಭೆಯಲ್ಲಿ ಅತಿಥಿಗಳಾಗಿ ಮಡಿಕೇರಿ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಎಂಸಿಸಿ ಹಿರಿಯ ಆಟಗಾರರುಗಳಾದ ಎನ್.ಕೆ.ರವೀಂದ್ರ, ಕುಟ್ಟಯ್ಯ ವಾಸು, ಪ್ರದೀಪ್, ಪ್ರಕಾಶ್, ಶಿವಣ್ಣ, ಸುಜಿತ್ ಚಿಣ್ಣಪ್ಪ, ಪ್ರಸನ್ನ, ದಾನಿ ಸೂದನ ಹೇಮಕುಮಾರ್, ಕ್ಲಬ್‌ನ ಕಾರ್ಯದರ್ಶಿ ಉಮೇಶ್‌ಕುಮಾರ್, ಖಜಾಂಚಿ ಪೀಟರ್, ಪದಾಧಿಕಾರಿಗಳಾದ ಸಚಿನ್ ವಾಸುದೇವ್, ಸುರ್ಜಿತ್ ಇನ್ನಿತರರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಎಂಸಿಸಿಯ ಕುಡೆಕಲ್ ಸಂತೋಷ್ ಸ್ವಾಗತಿಸಿ, ನಿರೂಪಿಸಿ, ಬಹುಮಾನ ವಿತರಣಾ ಕಾರ್ಯ ನಡೆಸಿಕೊಟ್ಟರು. ಅಶೋಕ ಸಹಕರಿಸಿದರು.
ರೂ.25ಸಾವಿರ ಬಹುಮಾನ
ವಿಜೇತ ತಂಡಕ್ಕೆ ರೂ. 25ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.15ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ವಿತರಣೆ ಮಾಡಲಾಯಿತು. ಪ್ರತಮ ನಗದು ಬಹುಮಾನವನ್ನು ದಾನಿ ಮಂಥರ್ ಗೌಡ ಹಾಗೂ ದ್ವಿತೀಯ ಬಹುಮಾನವನ್ನು ಮಾಜಿ ಯೋಧ, ಎಂಸಿಸಿ ಆಟಗಾರ ಸೂದನ ಹರ್ಷವರ್ಧನ್ ಪ್ರಾಯೋಜಿಸಿದ್ದರು.