ಕೂಡಿಗೆ ಜ.12 : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್.ಘಟಕ ಹಾಗೂ ಎಸ್.ಡಿ.ಎಂ.ಸಿ.ಸಹಯೋಗದೊಂದಿಗೆ ( (ಜ.12 ರಿಂದ) ಆರಂಭಗೊಂಡ ಎರಡು ದಿನಗಳ ಕಾಲದ ಕೂಡಿಗೆ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು.
ತರಗತಿ ಕೋಣೆಯ ಪಾಠದಿಂದ ಹೊರಬಂದ ಮಕ್ಕಳು ಆಟ- ಪಾಠ, ಹಾಡು- ನೃತ್ಯ, ಕರಕುಶಲ ಕಲೆ ಹಾಗೂ ಚಿತ್ರಕಲೆ ರಚನೆ ಮತ್ತಿತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ದಿನವಿಡೀ ತಮ್ಮನ್ನು ತೊಡಗಿಸಿಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಮಕ್ಕಳು ಸ್ವತಃ ತಾವೇ ತಯಾರಿಸಿಕೊಂಡಿದ್ದ ಕಾಗದದ ಟೋಪಿ ಧರಿಸಿ ಸಂಭ್ರಮಿಸಿದರು.
ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿಂದ ಆಗಮಿಸಿದ್ದ 4 ರಿಂದ 9ನೇ ತರಗತಿವರೆಗಿನ 120ಕ್ಕೂ ಹೆಚ್ಚಿನ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿ ತಮ್ಮನ್ನು ತಾವು ಮೈಮರೆತು ನಲಿಯುತ್ತಾ ಕಲಿಕೆಯಲ್ಲಿ ತೊಡಗಿದ್ದು, ಕಂಡುಬಂತು.
ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಈ ಹಬ್ಬದ ಮೂಲಕ ಮಕ್ಕಳು ತಮ್ಮನ್ನು ತಾವು ಸ್ವತಃ ಸ್ವಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಅನುಭವ ಹಾಗೂ ಚೇತೋಹಾರಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ವೃದ್ಧಿಸಲು ಸಹಕಾರಿಯಾದ ಈ ಕಲಿಕಾ ಹಬ್ಬವು
ಮಕ್ಕಳಲ್ಲಿ ಕ್ರಿಯಾಶೀಲ ವ್ಯಕ್ತಿತ್ವ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಉತ್ತಮ ವೇದಿಕೆ ಒದಗಿಸುತ್ತದೆ ಎಂದರು.
ಮಕ್ಕಳ ಕಲಿಕಾ ಹಬ್ಬದ ಮಹತ್ವ ಕುರಿತು ಮಾತನಾಡಿದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಮಗುವಿನ ಪ್ರಶ್ನೆಯೇ ಪ್ರಜ್ಞೆಯಾಗಲಿದೆ! ಏಕೆಂದರೆ “ಕಲಿಕಾ ಹಬ್ಬ’ದ ಮೂಲ ಆಶಯವೇ “ಪ್ರಶ್ನೆಯು ಪ್ರಜ್ಞೆ ಯಾಗಲಿ’ ಎಂಬುದು. ಮಗು ತನ್ನನ್ನು ತಾನು ರಚನಾತ್ಮಕ ತರಗತಿಯೊಳಗೆ ತೊಡಗಿಸಿಕೊಳ್ಳಲಿದೆ. ಇದು ಮಕ್ಕಳ ಸಂತಸದ ಕಲಿಕೆಯಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಆರಂಭವಾದ ಕಲಿಕಾ ಚೇತರಿಕೆಗೆ ಪೂರಕವಾಗಿ ಮಕ್ಕಳ ಕಲಿಕಾ ಹಬ್ಬವು ಮಕ್ಕಳ ಕಲಿಕೆಯನ್ನು ಖಾತ್ರಿಪಡಿಸಲು ಸಹಕಾರಿಯಾಗಿದೆ ಎಂದರು.
ಮಕ್ಕಳ ಕಲಿಕಾ ಹಬ್ಬದ ರೂಪುರೇಷೆ ಕುರಿತು ವಿವರಿಸಿದ ಸಿ ಆರ್ ಪಿ ಕೆ. ಶಾಂತಕುಮಾರ್, ಕಲಿಕಾ ಹಬ್ಬದಲ್ಲಿ ಮಗು “ಮಾಡು-ಆಡು’, “ಊರು ತಿಳಿಯೋಣ’, “ಕಾಗದ-ಕತ್ತರಿ’, “ಆಡು-ಹಾಡು’ ಎಂಬ ನಾಲ್ಕು ಗುಂಪುಗಳಲ್ಲಿ ಅನೇಕ ನಾವೀನ್ಯಪೂರ್ಣವಾದ ವಿಚಾರಗಳನ್ನು ಕಲಿಯಲಿದೆ. ಇಲ್ಲಿ ಮಗುವಿಗೆ ಹೆಜ್ಜೆಹೆಜ್ಜೆಗೂ ಚಟುವಟಿಕೆಗಳ ಮೂಲಕವೇ ತಾನು ಸ್ವತಃ ಅನುಭವಿಸಿ ಕಲಿಯಲು ಸಾಧ್ಯ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಎಲ್. ಸುಕುಮಾರಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಗ್ರಾ.ಪಂ. ಪಿಡಿಓ ಎಂ.ಆರ್.ಸಂತೋಷ್, ಬಿ ಆರ್ ಪಿ ಎಸ್.ಎನ್.ಲೋಕೇಶ್, ನಿವೃತ್ತ ಶಿಕ್ಷಕರಾದ ಎಂ.ರಂಗಸ್ವಾಮಿ, ಡಿ.ವಿ.ಗಣೇಶ್, ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಕೆ.ಪಿ.ರೇವಣ್ಣ, ದಾನಿ ಕೆ.ಎಸ್.ರಾಜಾಚಾರಿ, ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಎಚ್.ಎಸ್.ಸುಜಾತ, ರೇಣುಕ, ತಮ್ಮಯ್ಯ, ರಾಮೇಗೌಡ, ನವೀನ, ಗೋವಿಂದರಾಜು, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ. ರಮ್ಯ, ಅನ್ಸಿಲಾ ರೇಖಾ, ಎಸ್.ಎಂ. ಗೀತಾ ಹಾಜರಿದ್ದರು.
ಶಿಕ್ಷಕಿ ಎಸ್.ಎಂ.ಗೀತಾ ನಿರ್ವಹಿಸಿದರು. ಸಿ ಆರ್ ಪಿ ಕೆ.ಶಾಂತಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ವಂದಿಸಿದರು.
ಮಕ್ಕಳಿಗೆ ಸಂತಸದ ಕಲಿಕೆ : ಕಲಿಕಾ ಹಬ್ಬದ ಸಂಪನ್ಮೂಲ ಶಿಕ್ಷಕ ಕೆ.ಶಾಂತಕುಮಾರ್, ಎಸ್.ಎಂ.ಗೀತಾ, ರಜನಿ, ಮಂಗಳಗೌರಿ, ಕೆ.ಕೆ.ಗಾಯತ್ರಿ, ಸೋಮಶೇಖರ್ ಶಿಕ್ಷಕರೊಡಗೂಡಿ ಮಕ್ಕಳನ್ನು ದಿನವಿಡೀ ವಿವಿಧ ಚಟುವಟಿಕೆಗಳ ಮೂಲಕ ಸಂತಸದ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.
ವಿವಿಧ ಶಾಲೆಗಳಿಂದ ಹಾಗೂ ಪ್ರೌಢಶಾಲೆ ಮಕ್ಕಳು ಸೇರಿದಂತೆ 250 ಮಕ್ಕಳು “ಮಕ್ಕಳ ಹಬ್ಬ”ದಲ್ಲಿ ಭಾಗವಹಿಸಿದ್ದರು.