ನಾಪೋಕ್ಲು ಫೆ.1 : ಕಾಫಿ ಮಂಡಳಿಯಿಂದ ಕೊಡಗು ಜಿಲ್ಲೆಯಲ್ಲಿ ಕಾಫಿ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಅಗತ್ಯವಾದ ನೀರಾವರಿ ಸೌಲಭ್ಯ, ಪೈಪುಗಳು ಹಾಗೂ ಪಂಪ್ ಸೆಟ್ಗಳನ್ನು ಖರೀದಿಸಲು ಅಗತ್ಯ ಸಹಾಯಧನ ನೀಡಲಾಗುವುದು. ಮಾತ್ರವಲ್ಲದೆ ಹಳೆತೋಟವನ್ನು ಹೊಸ ತೋಟವನ್ನಾಗಿ ಮಾರ್ಪಡಿಸಲು ಸಹಾಯಧನ ಪಡೆಯಲು ಮಾ.31ರೊಳಗೆ ಬೆಳೆಗಾರರು ತಮಗೆ ಅಗತ್ಯವಿರುವಂತಹ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಸೌಲಭ್ಯಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್ ತಿಳಿಸಿದರು.
ನಾಪೋಕ್ಲುವಿನಲ್ಲಿ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವೆ ಏರ್ಪಟ್ಟ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಫಿಯ ತೋಟಗಳಿಗೆ ಅನಾವಶ್ಯಕ ರಾಸಾಯನಿಕ ಗೊಬ್ಬರ ಬಳಕೆಯನ್ನು ತಪ್ಪಿಸಬೇಕು. ಕಾಫಿ ಗಿಡಗಳ ನಿರ್ವಹಣೆ ಕಾಫಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ ಎಂದ ಚಂದ್ರಶೇಖರ್ ರೈತರಿಗೆ ಸಿಕ್ಕುವ ಸೌಲಭ್ಯಗಳು, ಮತ್ತು ಕಾಫಿ ತೋಟದ ನಿರ್ವಹಣೆ, ಮಣ್ಣು ಪರೀಕ್ಷೆ ಸಮಗ್ರ ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡುವುದು ಹಾಗೂ ಕಪಾತು ತರಬೇತಿ ನೀಡಲಾಗುವುದು ಎಂದು ಕಾಫಿ ತೋಟದ ನಿರ್ವಹಣೆಯ ಬಗ್ಗೆ ಹಾಗೂ ಮಂಡಳಿಯ ಮೂಲಕ ದೊರಕುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಬೆಳೆಗಾರರಿಗೆ ನೀಡಿ ಬೆಳೆಗಾರರ ಬೇಕು ಬೇಡಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸೂಕ್ತವಾಗಿ ಸ್ಪಂದಿಸಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಮಾತನಾಡಿ, ಕಾಫಿ ಬೆಳೆಗಾರರು ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವ್ಯಾಪಾರಿಗಳಿಂದ ಶೋಷಣೆಗೊಳಗಾಗುತ್ತಿದ್ದಾರೆ. ಮಾಯಿಶ್ಚರ್, ಔಟ್ ಟರ್ನ್ ನೆಪದಲ್ಲಿ ಬೆಳೆಗಾರರು ವ್ಯಾಪಾರಸ್ಥರಿಂದ ಶೋಷಣೆಗೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವಲ್ಲಿ ಮಂಡಳಿ ಕಾರ್ಯೋನ್ನುಖರಾಗಬೇಕು ಎಂದರು.
ಕಾಫಿ ಗಿಡಗಳ ಚಿಗುರುಗಸಿ ಮಾಡುವ ಸಂದರ್ಭ ಬೆಳಗಾರರಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ನೀಡುತ್ತಿರುವ ಅಗತ್ಯವಿದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ ಕಾವೇರಪ್ಪ ಕಾಫಿ ತೋಟಗಳ ಮಣ್ಣಿನ ಪರೀಕ್ಷೆಯನ್ನು ಕೈಗೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು ಎಂದರು.
ಬೆಳೆಗಾರರು ಕಷ್ಟಪಟ್ಟು ಬೆಳೆದ ಕಾಫಿಗೆ ಉತ್ತಮ ದರ ಲಭಿಸಿದರೆ ಮಾತ್ರ ರೈತರ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದರು.
ಕಾಫಿ ಬೆಳೆಗಾರ ನೂರಂಬಾಡ ಉದಯಶಂಕರ್ ಮಾತನಾಡಿ ಭಾರತದಲ್ಲಿ ಕೃಷಿಯಿಂದಾಗಿ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದೆ. ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಮಂಡಳಿ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಉತ್ಪನ್ನಕ್ಕೆ ತಕ್ಕ ದರ ದೊರೆತಲ್ಲಿ ಬೆಳೆಗಾರರಿಗೆ ಸಾಲದ ಅಗತ್ಯವಿಲ್ಲ. ಕಾಫಿ ಮಂಡಳಿಯ ಅಸ್ತಿತ್ವಕ್ಕಾಗಿ ಕಾಫಿ ಉತ್ಪಾದನೆ ಹೆಚ್ಚಿಸುವಂತೆ ಅಧಿಕಾರಿಗಳು ಪ್ರೇರೇಪಿಸುತ್ತಿದ್ದಾರೆ. ಅದು ಬಿಟ್ಟು ರೈತರ ಕಷ್ಟಗಳಿಗೆ ಸ್ಪಂದಿಸಿ ಎಂದರು. ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ ಕಾಫಿ ಬೆಳೆಗಾರರಿಗೆ ಇಳುವರಿಗೆ ತಕ್ಕ ದರ ಲಭಿಸುತ್ತಿಲ್ಲ. ಶೇಕಡ ಎಪ್ಪತ್ತರಷ್ಟು ರೈತ ಶ್ರಮದಿಂದಾಗಿ ಜಿಲ್ಲೆಯ ಆರ್ಥಿಕ ಸ್ಥಿತಿ ಹೊಂದಿದೆ ಎಂದರು.
ಕಾಫಿ ಮಂಡಳಿಯ ಅಧಿಕಾರಿಗಳಾದ (ಜೆ ಎಲ್ ಓ) ಅಜಿತ್ ಕುಮಾರ್ ರಾವತ್, ಚಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಮಂಜುನಾಥ್ ರೆಡ್ಡಿ ಇದ್ದರು.
ಈ ಸಂದರ್ಭ ಬೆಳೆಗಾರರಾದ ಬಿದ್ದಾಟಂಡ ಜಿನ್ನು ನಾಣಯ್ಯ, ಶಿವಚಾಳಿಯಂಡ ಜಗದೀಶ್, ಕಿಶೋರ್, ಕಾಂಡಂಡ ವಿಶ ಪುವಯ್ಯ, ಕುಲ್ಲೇಟ್ಟೀರ ಅರುಣ್ ಬೇಬ, ಅಜಿತ್ ನಾಣಯ್ಯ, ಪಾಡಿಯಮ್ಮಂಡ ಮನು ಮಹೇಶ್, ಕನ್ನಂಬೀರ ಸುದಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಬೆಳಗಾರರ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು .
ವರದಿ : ದುಗ್ಗಳ ಸದಾನಂದ.