ನಾಪೋಕ್ಲು ಜ.4 : ಜಿಲ್ಲೆಯಲ್ಲಿ ಸುರಿದ ದಿಢೀರ್ ಮಳೆಯಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕಾಫಿ ಕೊಯ್ಲು ಕೆಲಸ, ಭತ್ತದ ಒಕ್ಕಣೆ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಸುರಿದ ಮಳೆ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಕಾಫಿಯ ಹೂವುಗಳು ಅರಳುತ್ತಿದ್ದು, ಕಾಫಿ ಕೊಯ್ಲು ಕೆಲಸಕ್ಕೆ ಅಡ್ಡಿಯಾಗಿದೆ.
ನಿಗದಿತ ಅವಧಿಗಿಂತ ಮೊದಲು ಮಳೆ ಸುರಿದ ಪರಿಣಾಮ ಗಿಡಗಳಲ್ಲಿ ಹಣ್ಣಾದ ಕಾಫಿ ಉದುರುತ್ತಿದೆ. ಅಲ್ಪ ಪ್ರಮಾಣದ ಮಳೆಯಿಂದ ಮುಂದಿನ ವರ್ಷದ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೂಮಳೆ ಸುರಿದರೆ ಕಾಫಿ ಫಸಲು ನಿಶ್ಚಿತ ಎಂದು ಬೆಳೆಗಾರರು ದೃಢವಾಗಿ ನಂಬಿದ್ದಾರೆ. ಈ ವೇಳೆಗೆ ಕಾಫಿ ಕೀಳುವ ಕೆಲಸ ಪೂರ್ಣಗೊಂಡಿದ್ದು, ಕಾಫಿಯ ಮೊಗ್ಗುಗಳು ಅರಳಲು ಸಿದ್ಧವಾಗಿರುತ್ತವೆ. ಆ ವೇಳೆಗೆ ಮಳೆ ಸುರಿದರೆ ಬೆಳೆಗಾರರು ಸಂಭ್ರಮಿಸುತ್ತಾರೆ.ನೀರಿನ ವ್ಯವಸ್ಥೆ ಉಳ್ಳವರು ತುಂತುರು ನೀರಾವರಿ ಮೊರೆ ಹೋಗುತ್ತಾರೆ.ಆದರೆ ಈ ವರ್ಷ ಕಾಫಿ ಕೊಯ್ಲು ಆಗುತ್ತಿರುವಾಗಲೇ ಜನವರಿ ತಿಂಗಳಲ್ಲಿ ಮಳೆಯಾಗಿದೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ.ಅಂತೆಯೇ ಇಳುವರಿಯನ್ನು ಕಾಯ್ದುಕೊಳ್ಳುತ್ತ ರೈತರು ಚಿತ್ತ ಹರಿಸಿದ್ದಾರೆ.ಹೋಬಳಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತುಂತುರು ನೀರಾವರಿ ಮೂಲಕ ತೋಟಗಳಿಗೆ ನೀರನ್ನು ಹಾಯಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕಾಫಿ ಕುಯ್ಲು ಪೂರೈಸಿದ ಕೆಲವು ತೋಟಗಳ ಬೆಳೆಗಾರರು ನೀರಿನ ಮೂಲಗಳಿಂದ ತುಂತುರು ನೀರಾವರಿ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಇದರಿಂದ ಕಾಫಿ ಹೂಗಳು ಅರಳಿ ಇಳುವರಿಯನ್ನು ಕಾಯ್ದುಕೊಳ್ಳಬಹುದು ಎಂಬುದು ಬೆಳೆಗಾರರ ಅಭಿಪ್ರಾಯ.
ಸುರಿದ ಅಲ್ಪ ಮಳೆಗೆ ಬೇಗನೇ ಕಾಫಿಯ ಹೂಗಳು ಅರಳಿದರೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗುತ್ತಿದೆ ಎಂದು ಬಹುತೇಕ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾಫಿಯ ಹೂವು ಅರಳುತ್ತಿರುವುದರಿಂದ ಕಾಫಿಗೆ ಕೊಯ್ಲು ಪೂರ್ಣಗೊಳ್ಳದ ತೋಟಗಳಲ್ಲಿ ಕೊಯ್ಲು ಕೆಲಸವೂ ಮಂದಗತಿಯಲ್ಲಿ ಸಾಗುತ್ತಿದೆ. ವರದಿ : ದುಗ್ಗಳ ಸದಾನಂದ