ಮಡಿಕೇರಿ NEWS DESK ನ.24 : ಭಾಷೆ ಮತ್ತು ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ, ಇದನ್ನು ಓದುವ ಹವ್ಯಾಸದ ಮೂಲಕ ಬೆಳಗುವ ಕೆಲಸವಾಗಬೇಕು ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆಯ ದಾಖಲೆಯ “100ನೇ ಮೊಟ್ಟ್” 100ನೇ ಪುಸ್ತಕದ ಬಿಡುಗಡೆ ಸಮಾರಂಭವನ್ನು ಪತ್ರಿಕಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಜ್ಞಾನ ಭಂಡಾರದಿಂದ ಕೂಡಿರುವ ಸಾಹಿತ್ಯ ಕ್ಷೇತ್ರ ಭಾಷೆ ಮತ್ತು ಜಾತಿಯನ್ನು ಮೀರಿ ಬೆಳೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬರಹಗಾರರಿಗೆ ಪ್ರೋತ್ಸಾಹದ ಕೊರತೆ ಎದುರಾಗಿದೆ. ದಿಗ್ಗಜ ಸಾಹಿತಿಗಳ ನಡುವೆ ನಾವು ಬೆಳೆಯುವುದು ಕಷ್ಟ ಎನ್ನುವ ಆತಂಕ ಹೊಸ ಬರಹಗಾರರಿಂದ ದೂರವಾಗಬೇಕು. ಉತ್ತಮ ಸಾಹಿತ್ಯ ರಚನೆಯ ಮೂಲಕ ಮುಂದೆ ಬರಬೇಕು ಎಂದು ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದರು. ಇಂದು ಸಾಹಿತ್ಯ ಕ್ಷೇತ್ರದಲ್ಲಿ ರಚನಾತ್ಮಕ ವಿಮರ್ಶೆಯ ಅಗತ್ಯವಿದೆ, ಬರಹಗಾರರಿಗೆ ಅರಿವಿಲ್ಲದೆಯೇ ಆಕ್ಷೇಪಾರ್ಹ ಅಂಶಗಳು ಸಾಹಿತ್ಯದಲ್ಲಿ ನುಸುಳುವ ಸಾಧ್ಯತೆಗಳಿದೆ. ಇದನ್ನು ತಿದ್ದಿ, ಸೂಕ್ತ ಸಲಹೆಗಳನ್ನು ನೀಡಿ ಹೊಸ ಬರಹಗಾರರನ್ನು ಹುರಿದುಂಬಿಸುವ ವಿಮರ್ಶಾಕಾರರು ಬಂದರೆ ಸಾಹಿತ್ಯ ಲೋಕ ಸಮೃದ್ಧಿಯಾಗಲಿದೆ. ಪುಸ್ತಕವನ್ನು ಕೊಂಡುಕೊಂಡವರು ತಕ್ಷಣ ಓದಲು ಆರಂಭಿಸಬೇಕು, ಓದದೆ ಪುಸ್ತಕವನ್ನು ಎಲ್ಲೋ ಇಟ್ಟು ತಾತ್ಸಾರ ಮನೋಭಾವನೆ ತೋರಿದರೆ ಸಾಹಿತ್ಯ ದ್ರೋಹ ಮಾಡಿದಂತ್ತಾಗುತ್ತದೆ ಎಂದರು. ಕೊಡಗಿನ ಹಿರಿಯ ಸಾಹಿತಿಗಳು ತಮ್ಮ ಪರಿಶ್ರಮದ ಮೂಲಕ ಶ್ರೇಷ್ಠ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಇವುಗಳು ಇಂದು ಮರೆಯಾಗಿದ್ದು, ಮತ್ತೆ ಓದುಗರಿಗೆ ಸಿಗುವಂತ್ತಾಗಬೇಕು. ಕೊಡವ ಮಕ್ಕಡ ಕೂಟ ಸಂಘಟನೆ ಯಾವುದೇ ಲಾಭಾಂಶವನ್ನು ನಿರೀಕ್ಷೆ ಮಾಡದೆ ಜಿಲ್ಲೆಯಲ್ಲಿ ಸಾಹಿತ್ಯ ಯಜ್ಞವನ್ನೇ ಮಾಡುತ್ತಿದೆ. ಸಂಘಟನೆಯ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ನಿರಂತರ ಶ್ರಮದ ಫಲವಾಗಿ 100ನೇ ಪುಸ್ತಕ ಲೋಕಾರ್ಪಣೆಗೊಂಡಿದೆ. ಬರಹಗಾರರಿಗೆ ಸ್ಫೂರ್ತಿ ತುಂಬುತ್ತಿರುವ ಕೂಟಕ್ಕೆ ಕೊಡಗಿನ ಜನರ ಪ್ರೋತ್ಸಾಹದ ಅಗತ್ಯವಿದೆ ಎಂದು ಬಾಚರಣಿಯಂಡ ಅಪ್ಪಣ್ಣ ತಿಳಿಸಿದರು.
::: ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಬೇಕು :::
“100ನೇ ಮೊಟ್ಟ್” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಮಾಜ ಸೇವಕಿ ಮತ್ತು ಸಾಮಾಜಿಕ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಅವರು, ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ ಕೊಡಗು ಜಿಲ್ಲೆಯ ಬಗ್ಗೆ ವಿಶ್ವದೆಲ್ಲೆಡೆ ಹೆಮ್ಮೆ ಇದೆ. ಕೊಡಗಿನ ಶ್ರೇಷ್ಠ ವ್ಯಕ್ತಿಗಳು, ಪರಂಪರೆ, ಸಂಸ್ಕೃತಿ, ಆಚಾರ, ವಿಚಾರ ಇಡೀ ಪ್ರಪಂಚಕ್ಕೆ ಪರಿಚಯವಾಗಬೇಕಾದರೆ ಕನ್ನಡ, ಕೊಡವ ಭಾಷೆಯೊಂದಿಗೆ ಇಂಗ್ಲೀಷ್ ಭಾಷೆಯಲ್ಲೂ ಪುಸ್ತಕಗಳು ರಚನೆಯಾಗಬೇಕು ಎಂದರು. ಪುಸ್ತಕ ಕೊಳ್ಳುವವರು ಇದ್ದಾರೆ, ಆದರೆ ಓದಲು ಸಮಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ನಮ್ಮ ಸಂಸ್ಕೃತಿಯ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ. ಪುಸ್ತಕ ಕೊಂಡು ಓದುವ ಮೂಲಕ ಲೇಖಕರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಇಂದಿನ ಯುವ ಪೀಳಿಗೆ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಛಾಯಾ ನಂಜಪ್ಪ, ಪುಸ್ತಕಗಳನ್ನು ಓದುವಂತೆ ಕಿವಿಮಾತು ಹೇಳಿದರು.
ಕೊಡವ ಮಕ್ಕಡ ಕೂಟದ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. “100ನೇ ಮೊಟ್ಟ್” ಪುಸ್ತಕದ ಸಂಪಾದಕ ಹಾಗೂ ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರೀರ ಕರುಣ್ ಕಾಳಯ್ಯ ಮಾತನಾಡಿ “100ನೇ ಮೊಟ್ಟ್” ಕೊಡವ ಮಕ್ಕಡ ಕೂಟದ ಮಹತ್ವಾಕಾಂಕ್ಷೆಯ ಪುಸ್ತಕವಾಗಿದ್ದು, ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 45 ಕ್ಕೂ ಹೆಚ್ಚು ಲೇಖನಗಳಿವೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ದೇವನೆಲೆ, ಐನ್‌ಮನೆ, ಮಂದ್, ಪ್ರಕೃತಿ, ಕೊಡವ ಪದ್ಧತಿ ಸೇರಿದಂತೆ ಅನೇಕ ವಿಚಾರಗಳು ಒಳಗೊಂಡಿವೆ. ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಬರಹಗಾರರ ರಚನೆಗಳು “100ನೇ ಮೊಟ್ಟ್” ಪುಸ್ತಕದಲ್ಲಿ ಅಡಕವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಯಾವುದೇ ಒಳ್ಳೆಯ ಕಾರ್ಯವನ್ನು ಮಾಡುವ ಸಂದರ್ಭ ಪ್ರೋತ್ಸಾಹ ನೀಡುವವರಿಕ್ಕಿಂತ ಕಾಲು ಎಳೆಯುವವರ ಸಂಖ್ಯೆಯೇ ಹೆಚ್ಚು ಇರುತ್ತದೆ. ಆದರೆ ಇದೆಲ್ಲವನ್ನೂ ಮೀರಿ ಕೊಡವ ಮಕ್ಕಡ ಕೂಟ ಸಂಘಟನೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದೆ. ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಇಂದು 100ನೇ ಪುಸ್ತಕವನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆಯೂ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದರು. ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡವ ಕ್ರೀಡಾ ಕಲಿಗಳು, Kodagu Principality V/s British Emipire, The Major who kept his cool ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಕೊಡವ ಸಾಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಬರುತ್ತಿದೆ. 4 ಸಾವಿರ ಆಟ್‌ಪಾಟ್ ಪಡಿಪು ಪುಸ್ತಕವನ್ನು ಮುದ್ರಿಸಿ ಉಚಿತವಾಗಿ ಶಾಲಾ ಕಾಲೇಜು ಸೇರಿದಂತೆ ಹಲವು ಮಕ್ಕಳಿಗೆ ನೀಡಲಾಗಿದೆ. ನಿರಂತರ “ಮಕ್ಕಳ ಹಬ್ಬ” ಕಾರ್ಯಕ್ರಮವನ್ನು ನಡೆಸಿ ಮಕ್ಕಳಲ್ಲಿ ಕೊಡವ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಮಡಿಕೇರಿಯ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ವೃತ್ತದಲ್ಲಿ “ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ಅವರ ವೃತ್ತವನ್ನ ನಿರ್ಮಿಸಿ, ಅದೇ ಜಾಗದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಬೊಳ್ಳಜಿರ ಅಯ್ಯಪ್ಪ ಮಾಹಿತಿ ನೀಡಿದರು.
::: 4 ಪುಸ್ತಕಗಳ ಬಿಡುಗಡೆ :::
ಇದೇ ಸಂದರ್ಭ “100ನೇ ಮೊಟ್ಟ್” ಪುಸ್ತಕದೊಂದಿಗೆ ಕೊಡವ ಮಕ್ಕಡ ಕೂಟದ 101ನೇ ಪುಸ್ತಕ ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಬರೆದಿರುವ “ಮನಸ್‌ರ ಮರೆಲ್”, 102ನೇ ಪುಸ್ತಕ ಪೇರಿಯಂಡ ಯಶೋಧ ರಚಿಸಿರುವ “ಮನಸ್‌ರ ಜರಿ” 103ನೇ ಕರವಂಡ ಸೀಮಾ ಗಣಪತಿ ಬರೆದಿರುವ “ಮನಸ್‌ರ ತಕ್ಕ್” ಹಾಗೂ 104ನೇ ಪುಸ್ತಕವಾಗಿ ಐಚಂಡ ರಶ್ಮಿ ಮೇದಪ್ಪ ರಚಿಸಿರುವ “ಕೊಡವಡ ನಮ್ಮೆನಾಳ್” (ನಾಟಕ ರೂಪತ್‌ಲ್) ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಾಯಿತು. ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಮಾತನಾಡಿ “ಮನಸ್‌ರ ಮರೆಲ್” ಪುಸ್ತಕದಲ್ಲಿ ನೈಜ ಘಟನೆಗಳಿಗೆ ಕಥೆಯ ರೂಪ ನೀಡಲಾಗಿದೆ. ಪುಸ್ತಕಗಳನ್ನು ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದರು. “ಕೊಡವಡ ನಮ್ಮೆನಾಳ್” ಪುಸ್ತಕದ ಬರಹಗಾರ್ತಿ ರಶ್ಮಿ ಮೇದಪ್ಪ ಮಾತನಾಡಿ ಹಬ್ಬ, ಸಂಪ್ರದಾಯಗಳು ಎನ್ನುವುದು ಒಂದು ಜನಾಂಗದ ಪ್ರತೀಕವಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದು ಗಾಡಿಯ ಎರಡು ಚಕ್ರವಿದ್ದಂತೆ, ಒಂದಕ್ಕೆ ಹಾನಿಯಾದರೂ ಜನಾಂಗದ ಅಳಿವು ಖಚಿತ. ವಿಶ್ವ ಸಂಸ್ಥೆಯ ವರದಿಯಂತೆ ಅಳವಿನಂಚಿನಲ್ಲಿರುವ 197 ಭಾಷೆಗಳಲ್ಲಿ ಕೊಡವ ಭಾಷೆ ಕೂಡ ಇದೆ ಎನ್ನುವುದು ಆತಂಕಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. “ಮನಸ್‌ರ ಜರಿ” ಯ ಬರಹಗಾರ್ತಿ ಪೇರಿಯಂಡ ಯಶೋಧ ಹಾಗೂ “ಮನಸ್‌ರ ತಕ್ಕ್” ಪುಸ್ತಕದ ಬರಹಗಾರ್ತಿ ಸೀಮಾ ಗಣಪತಿ ಮಾತನಾಡಿ ಕೊಡವ ಮಕ್ಕಡ ಕೂಟದ ಸಾಧನೆ ಮತ್ತು ಬರಹಗಾರರಿಗೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು.
::: ಸನ್ಮಾನ :::
ತಮ್ಮದೇ ಅಧ್ಯಕ್ಷತೆಯಲ್ಲಿ ಕೊಡವ ಮಕ್ಕಡ ಕೂಟದ ಮೂಲಕ ದಾಖಲೆಯ 100 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಬೊಳ್ಳಜಿರ ಬಿ.ಅಯ್ಯಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಉಡುವೇರ ರೇಖಾ ರಘು ಸ್ವಾಗತಿಸಿ, ಚೋಕಿರ ಅನಿತಾ ನಿರೂಪಿಸಿ, ಬೊಟ್ಟೋಳಂಡ ನಿವ್ಯ ದೇವಯ್ಯ ವಂದಿಸಿದರು. ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ, ಬೊಪ್ಪಂಡ ಶ್ಯಾಮ್ ಪೂಣಚ್ಚ ಹಾಗೂ ಅಜ್ಜಮಕ್ಕಡ ವಿನು ಕುಶಾಲಪ್ಪ ಅವರುಗಳು ವ್ಯಕ್ತಿ ಪರಿಚಯ ಮಾಡಿದರು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*