ಮಡಿಕೇರಿ ಫೆ.21 : ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ಸಂವಿಧಾನದ 8 ನೇ ಶೆಡ್ಯೂಲ್‍ಗೆ ಕೊಡವ ಭಾಷೆಯನ್ನು ಸೇರಿಸಬೇಕು, ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು, ಆಕ್ಸ್‍ಫರ್ಡ್ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸಬೇಕು ಸೇರಿದಂತೆ ಒಟ್ಟು 26 ಹಕ್ಕೊತ್ತಾಯಗಳನ್ನು ಮಂಡಿಸಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ವಿವಿಧ ಬೇಡಿಕೆಗಳ ಪರವಾದ ಘೋಷಣೆಗಳನ್ನು ಕೂಗಿದ ಪ್ರಮುಖರು ಒಂದು ಜನಾಂಗದ ಉಳಿವಿಗೆ ಭಾಷೆಯ ಬೆಳವಣಿಗೆಯೂ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್ ಗೆ ಸಂವಿಧಾನದ ಭದ್ರತೆ ನೀಡಬೇಕು, ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ 345, 350, 350 ಎ, 350 ಬಿ ವಿಧಿಯಡಿ 1ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್ ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ ಅಧಿಕೃತ ಭಾಷೆ ಎಂದು ಘೋಷಿಸಬೇಕು, ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾನಿಲಯ, ಜೆ.ಎನ್.ಯು. ವಿಶ್ವವಿದ್ಯಾನಿಲಯ, ತಿರುವನಂತಪುರಂ ನಲ್ಲಿರುವ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ದ್ರಾವಿಡಿಯನ್ ಲಿಂಗ್ವಿಸ್ಟಿಕ್ಸ್ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಮತ್ತು ಟೋಕಿಯೋದಲ್ಲಿರುವ ವಿಶ್ವಸಂಸ್ಥೆ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ಭಾಷೆಯ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು, ಪ್ರತೀ ವರ್ಷ ಆಕ್ಸ್‍ಫರ್ಡ್ ಡಿಕ್ಷನರಿ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಹೊಸ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಆಕ್ಸ್‍ಫರ್ಡ್ ಡಿಕ್ಷನರಿ ಎರಡೂ ಶ್ರೀಮಂತವಾಗುವಂತೆ ಮಾಡಲು ಸರ್ಕಾರ ಕಾಳಜಿ ತೋರಬೇಕು.
ಕೊಡವ ತಕ್ ನ್ನು ಯುಎನ್‍ಒ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು. ಭವ್ಯ ಸಂಸ್ಕೃತಿಯ ಕೊಡವ ಜಾನಪದ ಪರಂಪರೆಯನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ಅಮೂರ್ತ ಸಾಂಸ್ಕೃತಿಕ ಪಟ್ಟಿಯಲ್ಲಿ ಸೇರಿಸಬೇಕು, ಕೊಡವ ಭಾಷಾ ಬುಡಕಟ್ಟು ಜನಾಂಗದ ಗನ್ ಸಂಸ್ಕೃತಿ ಅಂದರೆ ಕೊಡವ ಜನಾಂಗೀಯ ಸಂಸ್ಕಾರವನ್ನು ಸಿಖ್ಖರ ಕಿರ್ಪಾನ್‍ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಯಡಿ ರಕ್ಷಿಸಬೇಕು.
ಕೊಡವ ಭಾಷಾ ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಜಲ, ನೆಲ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ನೀಡುವ ಕೊಡವ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯಿನಾಡು ಕೊಡವಲ್ಯಾಂಡ್ ನ್ನು ಖಾತರಿ ಪಡಿಸಬೇಕು. ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು. ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೇ ಅದೇ ಕೊಡವ ಹೆಸರಿನಿಂದಲೇ ದಾಖಲಿಸಬೇಕು, ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ ಕೈಲ್ ಪೊವ್ದ್, ಎಡಮ್ಯಾರ್, ಕಕ್ಕಡ ಪದ್ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಇತ್ಯಾದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು. ಕೊಡಗರು ಎಂದು ಕಾಗುಣಿತ ದೋಷದಿಂದ ವಿರೂಪಗೊಂಡಿರುವ ಕೊಡವ ಸಮುದಾಯದ ಸೂಚಕ ಹೆಸರನ್ನು ಕೊಡಗರು ಬದಲಿಗೆ ಕೊಡವ ಎಂದು ನಮೂದಿಸಲು ಕ್ರಮ ಕೈಗೊಳ್ಳಬೇಕು, ಈ ಸಂಬಂಧ ತಕ್ಷಣ ಕೊಡವ ಎಂದು ಗಜೆಟ್ ನೋಟಿಫಿಕೇಷನ್ ಹೊರಡಿಸಬೇಕು, “ಕೊಡವ ತಕ್” ವಾರ್ತೆಯನ್ನು ದೂರದರ್ಶನ (ಡಿ.ಡಿ 1) ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಭಿತ್ತರಿಸಬೇಕು. ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್‍ನಲ್ಲಿ ಕೊಡವ ಬುಡಕಟ್ಟು ಜಾನಪದ ಲೋಕದ ಸಾಂಸ್ಕೃತಿಕ ಅನನ್ಯತೆ ಮತ್ತು ಪಾರಂಪರಿಕ ಅಪೂರ್ವತೆಯನ್ನು ಅಧಿಕೃತವಾಗಿ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಲೆಫ್ಟಿನೆಂಟ್ ಕರ್ನಲ್ ಬಿ.ಎಮ್. ಪಾರ್ವತಿ, ಕೂಪದಿರ ಪುಷ್ಪ ಮುತ್ತಣ್ಣ, ಚೋಳಪ್ಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಬೊಟ್ಟಂಗಡ ಸವಿತಾ ಗಿರೀಶ್, ಕಲಿಯಂಡ ಪೃಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಚಂಬಂಡ ಜನತ್, ಅರೆಯಡ ಗಿರೀಶ್, ಕಿರಿಯಮಾಡ ಶರಿನ್, ಬೇಪಡಿಯಂಡ ದಿನು, ಅಜಿನಿಕಂಡ ಸನ್ನಿ ಮಾಚಯ್ಯ, ಕೂಪದಿರ ಸಾಬು ತಮ್ಮಯ್ಯ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚೆಂಡ ದೇವಯ್ಯ, ಕೋಡಿರ ರತನ್, ಅಪ್ಪಾರಂಡ ಪೃಸಾದ್, ಪಟಮಾಡ ಕುಶ, ಪಟ್ಟಮಾಡ ಅಶೋಕ್, ಪುದಿಯೋಕಡ ಕಾಶಿ, ಬೇಪಡಿಯಂಡ ಬಿದಪ, ಕಾಂಡೇರ ಸುರೇಶ್ ಮತ್ತಿತರರು ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕೊಡವ, ಕೊಡವತಿಯರು ಸಂವಿಧಾನಿಕ ಹಕ್ಕೊತ್ತಾಯಗಳ ಸಾಧನೆಗಾಗಿ ಗುರು-ಕಾರೋಣ, ಧಾರ್ಮಿಕ ಸಂಸ್ಕಾರ ಕೋವಿ, ಸೂರ್ಯ-ಚಂದ್ರ, ಭೂದೇವಿ, ದೈವಿಕ ಜಲದೇವಿ ಕಾವೇರಿ ಮತ್ತು ವನದೇವತೆ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
Breaking News
- *ಮಾವಿನಹಳ್ಳ ಹಾಡಿ ಮತ್ತು ಕಟ್ಟೆ ಹಾಡಿಯ ಅರಣ್ಯ ಹಕ್ಕು ಗ್ರಾಮಸಭೆ*
- *ಬಾಳೆಲೆ : ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ*
- *ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ*
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*