ಮಡಿಕೇರಿ ಜ.22 NEWS DESK : ಕೋಟ್ಯಂತರ ಭಾರತೀಯರ ಹೃದಯದಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮ ಶಾಶ್ವತ ಸ್ಥಾನ ಪಡೆದಿದ್ದು, ಈತನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ‘ಶ್ರೀ ಬಾಲರಾಮನ’ ಪ್ರಾಣ ಪ್ರತಿಷ್ಠೆ ನಡೆದು ವರ್ಷ ತುಂಬಿರುವ ಸಂಭ್ರಮದಲ್ಲಿ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ನಗರದಲ್ಲಿ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಭಾರತೀಯರ ಶತ ಶತಮಾನಗಳ ಕನಸು ಕಳೆದ ಸಾಲಿನಲ್ಲಿ ಶ್ರೀ ಬಾಲ ರಾಮನ ಪ್ರತಿಷ್ಠಾಪನೆಯೊಂದಿಗೆ ಅಯೋಧ್ಯೆಯ ಭವ್ಯ ಸುಂದರ ಮಂದಿರ ಭಕ್ತರಿಗೆ ತೆರೆದುಕೊಂಡಿದೆ. ಈ ಸಂಭ್ರಮವನ್ನು ಕಳೆದ ಸಾಲಿನಲ್ಲಿಯೂ ಶ್ರೀರಾಮ ಜನ್ಮಭೂಮಿ ಸೇವಾ ಸಮಿತಿ ಅನ್ನಸಂತರ್ಪಣೆಯ ಮೂಲಕ ಜನ ಮಾನಸದೊಂದಿಗೆ ಹಂಚಿಕೊಂಡಿತ್ತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆಯವರೆಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಪದಾಧಿಕಾರಿಗಳು, ನೆರವು ನೀಡಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರದ್ಧೆಯಿಂದ ಈ ಕಾರ್ಯ ನೆರವೇರಿಸಿದ್ದು ವಿಶೇಷ. ನಗರ ವ್ಯಾಪ್ತಿಯ ಹಾಗೂ ದೂರದೂರುಗಳಿಂದ ಆಗಮಿಸಿದ ನೂರಾರು ಸಾರ್ವಜನಿಕರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು, ಅನ್ನಪ್ರಸಾದವನ್ನು ಸ್ವೀಕರಿಸಿದ್ದು ಗಮನ ಸೆಳೆಯಿತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ನಿರ್ದೇಶಕರಾದ ಪಿ.ಡಿ.ನವೀನ್, ಬಿ.ಎಸ್. ಪ್ರಭು ರೈ, ಎಂ.ಯು.ರಘ, ಪ್ರಸಾದ್ ಸಂಪಿಗೆ ಕಟ್ಟೆ, ಸದಾಶಿವ ರೈ, ಆನಂದ್, ಬಿ.ಎಂ.ಶೇಖರ್ ಅವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಅನ್ನಸಂತರ್ಪಣಾ ಕಾರ್ಯವನ್ನು ನೆರವೇರಿಸಿ ಗಮನ ಸೆಳೆದರು.