ನಾಪೋಕ್ಲು ಮಾ.16 : ಯಾವ ಮನೆಯಲ್ಲಿ ಸ್ತ್ರೀ ವಿದ್ಯಾವಂತಳಾಗಿರುತ್ತಾಳೋ ಆ ಕುಟುಂಬ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಅಯ್ಯಣ್ಣ ಹೇಳಿದರು.
ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪೋಷಕರ ಗುಣ, ನಡತೆ, ಮಾರ್ಗದರ್ಶನದಿಂದ ಮಕ್ಕಳ ವಿದ್ಯಾಭ್ಯಾಸ, ಉನ್ನತಿ, ಹಣಕಾಸು ನಿರ್ವಹಣೆ ಉತ್ತಮವಾಗಲಿದ್ದು, ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಮಹಿಳೆಯರು ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ವತಿಯಿಂದ ಶಿಕ್ಷಕಿ ಮುಂಡಂಡ ಕವಿತಾ ಅಯ್ಯಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಹಿಳೆಯರಿಗಾಗಿ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರುಗಳಾದ ಕೇಟೋಳಿರ ಶಾರದಾ ಪಳಂಗಪ್ಪ, ಮುಂಡಂಡ ಸುಶೀಲ ಸೋಮಣ್ಣ, ಅಪ್ಪಾರಂಡ ಡೈಸಿ ತಿಮ್ಮಯ್ಯ, ಪುಲ್ಲೇರ ಪದ್ಮಿನಿ, ಬಿದ್ದಾಟಂಡ ಗಿರಿಜಾ ಬೋಪಣ್ಣ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಂಡಿಯೋಳಂಡ ಕವಿತಾ, ರಾಜೇಶ್ವರಿ ಲೋಕೇಶ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.