ಮಡಿಕೇರಿ ಮಾ.23 : ಯುಗಾದಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ‘ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾವಳಿ’ ಮಾ.24 ರಿಂದ 26ರವರೆಗೆ ನಾಪೋಕ್ಲುವಿನಲ್ಲಿ ನಡೆಯಲಿದೆಯೆಂದು ಬಜರಂಗದಳದ ನಾಪೋಕ್ಲು ವಿಭಾಗದ ಸಂಚಾಲಕ ರಾಧಕೃಷ್ಣ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಾಪೋಕ್ಲುವಿನ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆರಂಭಿಕ ದಿನದಂದು ಬೆಳಿಗ್ಗೆ 9.30 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ವಿ.ಹಿಂ.ಪ. ನಾಪೋಕ್ಲು ಸಂಚಾಲಕ ನಾಟೋಳಂಡ ಸಚಿನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿದ್ದಾಟಂಡ ದಿನೇಶ್, ಹಿರಿಯ ವಕೀಲರು ಹಾಗೂ ಸಮಾಜ ಸೇವಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ವಿ.ಹಿಂ.ಪ. ಬೆಂಗಳೂರು ಪ್ರಮುಖ ಮುನಿಕೃಷ್ಣ, ಸಮಾಜ ಸೇವಕ ಡಾ.ಮಂಥರ್ ಗೌಡ, ಬ್ರೂ ವಿಲ್ಲಾ ಹೋಂ ಸ್ಟೇ ಮಾಲೀಕ ರೋಷನ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಉದ್ಯಮಿಗಳಾದ ಬಲ್ಲಂಡ ಗಿರಿ, ಕಂಗಂಡ ಅರುಣ, ನಾಪೋಕ್ಲು ಎಂ.ಪಿ.ಸ್ಟೋರ್‍ನ ಮಧು ಮೋಹನ, ಕುಶಾಲನಗರ ಆ್ಯಡ್ ಕೂರ್ಗ್‍ನ ಮಧು, ಗೋ ರಕ್ಷಕ್ ಪ್ರಮುಖ ದಿಲೀಪ್ ಪೂಜಾರಿ, ಬಜರಂಗದಳ ಸಹ ಸಂಚಾಲಕ ಕುಮಾರ್, ಗುತ್ತಿಗೆದಾರ ವಿನಾಯಕ, ಉದ್ಯಮಿ ಬೊಳ್ಳಂಡ ಶರಿನ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ 30 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹಗ್ಗಜಗ್ಗಾಟ ಪಂದ್ಯಾವಳಿಯ ವಿಜೇತ ತಂಡಕ್ಕೆ 15 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 10 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ವೈಯಕ್ತಿಕ ಬಹುಮಾನ ವಿತರಿಸಲಾಗುವುದೆಂದು ರಾಧಕೃಷ್ಣ ರೈ ತಿಳಿಸಿದರು.
ಸೆಮಿಫೈನಲ್ ಪಂದ್ಯಗಳು-ಮಾ.26 ರಂದು ಬೆಳಿಗ್ಗೆ 9 ಗಂಟೆಗೆ ಕಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ನಡೆಯಲಿದ್ದು, 10.30 ಗಂಟೆಗೆ ಎರಡನೇ ಸೆಮಿಫೈನಲ್. ಮಧ್ಯಾಹ್ನ 12.30 ಗಂಟೆಗೆ ಕ್ರಿಕೆಟ್ ಫೈನಲ್ ಪಂದ್ಯ ಉದ್ಘಾಟನೆಯಾಗಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ನಾಪೋಕ್ಲು ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3.30 ಗಂಟೆಗೆ ಹಗ್ಗಜಗ್ಗಾಟ ಅಂತಿಮ ಪಂದ್ಯದ ಉದ್ಘಾಟನೆ ನಡೆಯಲಿದ್ದು, ಇದರಲ್ಲಿ ನಾಪೋಕ್ಲು ಗ್ರಾಪಂ ಸದಸ್ಯರಾದ ಬಿ.ಎಂ.ಪ್ರಥೀಪ್ ಸೇರಿದಂತೆ ಹಲ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪ- ಧಾರ್ಮಿಕ ಸಭೆ-ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ನಾಪೋಕ್ಲು ಬಜರಂಗದಳದ ಸಂಚಾಲಕ ಬಿ.ಸಿ.ರಾಧಕೃಷ್ಣ ರೈ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ವಾಗ್ಮಿ ಚೈತ್ರಾ ಕುಂದಾಪುರ ಆಗಮಿಸಲಿದ್ದು, ಧರ್ಮ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಬಜರಂಗದಳದ ರಾಜ್ಯ ಸಹ ಸಂಘಟಕ ಪ್ರಭಂಜನ್ ಧರ್ಮ ರಕ್ಷಣೆ ಎಂಬ ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಕೀಲ ಹಾಗೂ ವಿ.ಹಿಂ.ಪ. ಜಿಲ್ಲಾ ಅಧ್ಯಕ್ಷ ಕೃಷ್ಣ ಮೂರ್ತಿ, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಸಂಪರ್ಕ ಪ್ರಮುಖ್ ಅಜಿತ್, ಬಜರಂಗದಳದ ಸಂಚಾಲಕ ಅನೀಶ್, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ.ಜಗದೀಶ್ ರೈ ಹಾಗೂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿ.ಹಿಂ.ಪ. ನಾಪೋಕ್ಲು ಸಂಚಾಲಕ ನಾಟೋಳಂಡ ಸಚಿನ್, ಸಹ ಸಂಚಾಲಕ ಅರೆಯಡ ನಂಜಪ್ಪ, ಬಜರಂಗದಳದ ಸದಸ್ಯರಾದ ಎಂ.ಸಿ.ನಾಗರಾಜು, ಪಿ.ಹೆಚ್.ಪ್ರದೀಪ್ ಉಪಸ್ಥಿತರಿದ್ದರು.