ಮಡಿಕೇರಿ ಏ.7 : ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿಯಾಗಿದ್ದ ಹರಪ್ಪಳ್ಳಿ ರವೀಂದ್ರ ಅವರು ಕಾಂಗ್ರೆಸ್ ಟಿಕೆಟ್ ತಪ್ಪಿರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ವತೋಮುಖ ಪ್ರಗತಿಯ ಚಿಂತನೆಯಡಿ ಕೊಡಗಿನ ಚಿತ್ರಣವನ್ನೇ ಬದಲಿಸಬೇಕೆನ್ನುವ ಉದ್ದೇಶದಿಂದ ರಾಜಕೀಯ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದೆ. ಕೊನೆಯ ಕ್ಷಣಗಳಲ್ಲಿ ಪಕ್ಷದ ಟಿಕೆಟ್ ವಂಚಿತನಾಗಿದ್ದೇನೆ. ಶನಿವಾರ ಶನಿವಾರಸಂತೆಯಲ್ಲಿ ಬೆಂಬಲಿಗರ ಸಭೆ ನಡೆಯಲಿದ್ದು, ಅಲ್ಲಿನ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸುತ್ತಲೆ, ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಗಳನ್ನು ತೆರೆದಿಟ್ಟು, ಏ.17 ರಂದು ನಾಮಪತ್ರ ಸಲ್ಲಿಕೆ ಮಾಡಬೇಕೆನ್ನುವ ಉದ್ದೇಶವಿದೆಯೆಂದು ತಿಳಿಸಿದರು.
ಕಳೆದ ಎರಡೂವರೆ ದಶಕಗಳಿಂದ ಪ್ರಚಾರದ ಹಂಗಿಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದೇನೆ. ತಾನು ಒಕ್ಕಲಿಗರ ಸಂಘದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವ ಕುಮಾರ್ ಅವರು, ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಿ ತನ್ನನ್ನು ಕಾಂಗ್ರೆಸ್‍ಗೆ ಕರೆ ತಂದರು. ಇದೀಗ ಅವರು ನೀಡಿದ ಭರವಸೆಗಳು ಹುಸಿಯಾಗಿದ್ದು, ಟಿಕೆಟ್ ವಂಚಿತನಾಗಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಆರಂಭಿಕ ಹಂತದಲ್ಲಿ ಏಳು ಮಂದಿ ಆಕಾಂಕ್ಷಿಗಳಿದ್ದರು. ಕೊನೆಯ ಹಂತದಲ್ಲಿ ಪಕ್ಷದ ವರಿಷ್ಠರ ಮುಂದೆ ತನ್ನ ಮತ್ತು ಮಂಥರ್ ಗೌಡ ಅವರ ಹೆಸರು ಮಾತ್ರ ಇತ್ತು. ತನಗೆ ಟಿಕೆಟ್ ದೊರಕಿಯೇ ತೀರುತ್ತದೆನ್ನುವ ವಿಶ್ವಾಸವಿತ್ತಾದರು, ಟಿಕೆಟ್ ಮಂಥರ್ ಗೌಡ ಅವರಿಗೆ ದೊರಕಿದೆಯೆಂದು ತಿಳಿಸಿದರು.
ಅಭಿವೃದ್ಧಿಯ ವಿಶಾಲ ಚಿಂತನೆ ಹೊಂದಿದ್ದೆ : ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಉದ್ದೇಶದ ಹಿಂದೆ ಕೊಡಗಿನ ಸಮಗ್ರ ಅಭಿವೃದ್ಧಿಯ ವಿಶಾಲ ಚಿಂತನೆ ಇತ್ತು. ರಾಜಕೀಯ ಅಧಿಕಾರದ ಮೂಲಕ ಅದನ್ನು ಸಾಧಿಸುವ ಉದ್ದೇಶ ಹೊಂದಿದ್ದೆ.ಮುಂದೆ ಯಾರೇ ಶಾಸಕರಾಗಿ ಆಯ್ಕೆಯಾಗಿ ಬಂದರು ಜಿಲ್ಲೆಯ ಜನತೆಗೆ ಅತ್ಯವಶ್ಯವಾಗಿ ಬೇಕಾಗಿರುವ ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಗೆ ಒತ್ತು ನೀಡಬೇಕು ಮತ್ತು ಪ್ರಾಕೃತಿಕ ಸಂಪತ್ತು ಹೊಂದಿರುವ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭೀವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸೈನಿಕ ಮತ್ತು ಕ್ರೀಡಾ ಶಾಲೆಯ ನಿರ್ಮಾಣ ಮಾಡಬೇಕು, ಜಿಲ್ಲೆಯ ಪ್ರತಿಭಾನ್ವಿತ ಯುವ ಸಮೂಹ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ತರಬೇತಿ ಕೇಂದ್ರವನ್ನು ತೆರೆಯುವ ಹೊಣೆಗಾರಿಕೆಯನ್ನು ಮುಂದೆ ಶಾಸಕರಾಗಿ ಆಯ್ಕೆಯಾಗುವವರು ಹೊರಬೇಕೆಂದು ತಿಳಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ತಾನು ಕಣಕ್ಕಿಳಿದು ಗೆಲುವು ಸಾಧಿಸಿದಲ್ಲಿ ಕೊಡಗಿನ ಯುವ ಸಮೂಹಕ್ಕೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವುದು, ಅಭಿವೃದ್ಧಿ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಹೊಸ ಶಕೆಯನ್ನೆ ಆರಂಭಿಸುವುದು ನನ್ನ ಗುರಿಯಾಗಿದೆಯೆಂದು ಸಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹರಪ್ಪಳ್ಳಿ ರವೀಂದ್ರ ಅವರ ಅಭಿಮಾನಿ ಕೆ.ಎಂ. ವೆಂಕಟೇಶ್ ಉಪಸ್ಥಿತರಿದ್ದರು.