ಮಡಿಕೇರಿ ಏ.17 : ಪೊನ್ನಂಪೇಟೆಯ ಆಸ್ಟ್ರೋ ಟ್ರಾಫ್ ಮೈದಾನದಲ್ಲಿ ಹಾಕಿ ಬೇಸಿಗೆ ಶಿಬಿರ ಆರಂಭಗೊಂಡಿದ್ದು, 75ಕ್ಕೂ ಹೆಚ್ಚು ಭವಿಷ್ಯದ ಹಾಕಿ ಕ್ರೀಡಾ ಕಲಿಗಳು ಲವಲವಿಕೆಯಿಂದ ಪಾಲ್ಗೊಂಡಿದ್ದರು.
ಶಿಬಿರದಲ್ಲಿ ವ್ಯಾಯಾಮ, ಪ್ರಥಮ ಹಂತದಲ್ಲಿ ಹಾಕಿ ಆಟದ ಬಗ್ಗೆ ತರಬೇತಿ ಹಾಗೂ ಎರಡು ವಿಭಾಗಗಳಲ್ಲಿ ತಂಡ ರಚಿಸಿ ಹಾಕಿ ತರಬೇತಿ ನೀಡಿದ್ದಾರೆ.
ಡಿ ವೈ ಎಸ್ ಎಸ್ ನ ತರಬೇತಿದಾರರಾದ ಕುಪ್ಪಂಡ ಸುಬ್ಬಯ್ಯ ಅವರ ಮುಂದಾಳತ್ವದಲ್ಲಿ, ಮುಕಳಮಾಡ ಗಣಪತಿ, ಕೆಲೋ ಇಂಡಿಯಾ ಸೆಂಟ್ರಿನ ತರಬೇತಿದಾರ ಸೌಮ್ಯ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ಹಾಕಿ ಕ್ರೀಡಾಪಟು ಹಾಗು ಕಾವೇರಿ ಕಾಲೇಜಿನ ದೈಹಿಕ ಶಿಕ್ಷಕ ಕೆ.ತಮ್ಮಯ್ಯ ತರಬೇತಿಯನ್ನು ನೀಡುತ್ತಿದ್ದಾರೆ.
ಏ.21 ರವರೆಗೆ ಈ ತರಬೇತಿ ಶಿಬಿರ ನಡೆಯಲಿದ್ದು, ಒಂದೆರಡು ದಿನಗಳು ಮುಂದೂಡುವ ಸಾಧ್ಯತೆ ಇದೆ ಎಂದು ತರಬೇತಿದಾರ ಸುಬ್ಬಯ್ಯ ಹೇಳಿದ್ದಾರೆ. ಬೆಳಿಗ್ಗೆ ಶಿಬಿರಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಕೂಡ ನೀಡುತ್ತಿದ್ದಾರೆ. ಮುಂಜಾನೆ ಈ ಮೈದಾನಕ್ಕೆ ಶಿಬಿರಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ಶಿಬಿರದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.