ಮಡಿಕೇರಿ ಏ.20 : ನಮಗೆ ಸುಂದರವಾದ ಪರಿಸರ ದೈವಾನುಗ್ರಹವಾಗಿ ಸಿಕ್ಕಿದ್ದು ಅದನ್ನು ಹಾಗೂ ಜೀವಜಲವನ್ನು ಸಂರಕ್ಷಣೆ ಮಾಡುವಂತೆ ಏರ್ ಮಾರ್ಷಲ್(ನಿ) ಕೊಡಂದೇರ ಕಾರ್ಯಪ್ಪ ಮಕ್ಕಳಿಗೆ ಕರೆ ನೀಡಿದರು.
ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ನಗರದ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ಏರ್ಪಡಿಸಲಾಗಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ಶಿಬಿರಕ್ಕೆ ಆಗಮಿಸಿ, ಮಕ್ಕಳೊಂದಿಗೆ ಬೆರೆತು ಹಿತವಚನಗಳನ್ನು ನುಡಿದರು.
ದೈವಾನುಗ್ರಹದಿಂದ ನಮಗೆ ಸುಂದರವಾದ ಪರಿಸರ ಸಿಕ್ಕಿದೆ. ಅದನ್ನು ಹಾಳು ಮಾಡಬಾರದು, ಎಲ್ಲೆಂದರಲ್ಲಿ, ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿರುವದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕಸ ಹಾಕದಂತೆ ತಡೆಗಟ್ಟಬೇಕೆಂದು ಹೇಳಿದರು. ಈಗಿನ ಬಿಸಿಲ ಬೇಗೆ ಹೇಳತೀರದ್ದಾಗಿದೆ. ಜನರು ನಾಳೆ ಇದೆ ಎಂಬುವದನ್ನು ನಂಬುವದಿಲ್ಲ; ಭವಿಷ್ಯದಲ್ಲಿ ಇಲ್ಲಿನ ಬೆಳೆಗಾರರ ಪರಿಸ್ಥಿತಿ ಹೇಗೆಂದು ಹೇಳಲಾಗದು. ಹಾಗಾಗಿ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆ ಸಂಪಾದಿಸುವಂತಾಗಬೇಕು. ಬಿಸಿಲಿಗೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮಡಿಕೇರಿ ಬಳಿಯ ಕೂಟುಹೊಳೆಯಲ್ಲಿಯೂ ನೀರು ಕಡಿಮೆಯಾಗಿದೆ. ಹಾಗಾಗಿ ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು. ಕುಡಿಯುವ ನೀರಿನಿಂದ ವಾಹನಗಳನ್ನು ತೊಳೆಯಬಾರದು, ಮನೆಯಲ್ಲಿ ಮುಖ ತೊಳೆಯಲು, ಸ್ನಾನಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಬಳಸಬೇಕೆಂದು ಹೇಳಿದರು.
ಸೇನೆಯಲ್ಲಿ ಉತ್ತಮ ಭವಿಷ್ಯವಿದೆ. ಆಸಕ್ತಿ ಇರುವವರು ಮೂರು ಸೇನೆಗಳ ಪೈಕಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮೊದಲಿಗೆ ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಹಾಗೂ ಭಾರತದ ಬಗ್ಗೆ ಚಿಂತಿಸಬೆಕು. ನಮ್ಮ ತಂದೆಯನ್ನು ಯಾವ ಜಾತಿ ಎಂದು ಕೇಳಿದರೆ ಅವರು ನನಗೆ ಜಾತಿಯಿಲ್ಲ, ನಾನೊಬ್ಬ ಭಾರತೀಯ ಎಂದು ಹೇಳುತ್ತಿದ್ದರು ಎಂಬದನ್ನು ಮಕ್ಕಳಿಗೆ ನೆನಪಿಸಿದರು. ಪ್ರತಿಯೋರ್ವರು ಜೀವನದಲ್ಲಿ ಸಂತೋಷವಾಗಿರಬೇಕು, ಮೊದಲಿಗೆ ಹೆತ್ತವರಿಗೆ ಹಾಗೂ ಕಲಿಸುವ ಗುರುಗಳಿಗೆ ಗೌರವ ನೀಡಬೇಕು. ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಂಡು ಮುನ್ನಡೆಯಬೇಕೆಂದು ಹೇಳಿದರಲ್ಲದೆ, ತಾವು ಸೇನೆಗೆ ಸೇರಲು ಶಂಕರ್ ಸ್ವಾಮಿ ಕಾರಣ ಎಂದು ನೆನೆಸಿಕೊಂಡರಲ್ಲದೆ, ಅವರು ತಮ್ಮ ಗುರುಗಳು ಎಂದು ಮಕ್ಕಳಿಗೆ ತಿಳಿಹೇಳಿದರು.
ಈ ಸಂದರ್ಭ ಶಂಕರ್ ಸ್ವಾಮಿ ಅವರ ಪುತ್ರ ಗುರುದತ್ತ್, ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಶಿಬಿರ ಸಂಚಾಲಕ ಬಾಬು ಸೋಮಯ್ಯ, ವಾಂಡರ‍್ಸ್ನ ತರಬೇತುದಾರರುಗಳಾದ ಎಸ್.ಟಿ.ವೆಂಕಟೇಶ್, ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ, ಮಕ್ಕಳ ಪೊಷಕರು ಇದ್ದರು.