ಮಡಿಕೇರಿ ಏ.25 : ಹುಸಿ ಭರವಸೆ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ‘ಡಬಲ್ ಎಂಜಿನ್’ ಸರ್ಕಾರವನ್ನು ಸೋಲಿಸಿ, ಜಾತ್ಯತೀತ ಮತ್ತು ಜನಪರವಾದ ಪ್ರಜಾಸತ್ತಾತ್ಮಕ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕೆಂದು ಸಿಪಿಐ(ಎಂಎಲ್)ಆರ್‍ಐನ ಕೇಂದ್ರ ಸಮಿತಿ ಸದಸ್ಯ ಎಇ.ಎಸ್. ನಿರ್ವಾಣಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ನಮ್ಮನ್ನಾಳುತ್ತಿರುವ ಸರ್ಕಾರಗಳಿಂದ ಸಂವಿಧಾನ ಅಪಾಯದಲ್ಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿದೆ ಎಂದು ಆರೋಪಿಸಿದರು.
ಪ್ರಸ್ತುತ ಸ್ಥಿತಿಗತಿಯ ವಿರುದ್ಧ ಸಿಪಿಐ(ಎಂಎಲ್) ಮೂಲಕ ‘ಎದ್ದೇಳು ಕರ್ನಾಟಕ’ ಎನ್ನುವ ಅಭಿಯಾನವನ್ನು ನಡೆಸಲಾಗುತ್ತದೆ. ಆ ಮೂಲಕ ಜನರಿಗೆ ನಿಜ ಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ರಾಮ ರಾಜ್ಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ದೇಶ ವ್ಯಾಪಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳ, ಜನರ ಮೇಲೆ ತೆರಿಗೆಯ ಹೊರೆ, ರೈತರ ಸಾವು, ಕರಾಳ ಕಾಯ್ದೆಗಳ ಹೇರಿಕೆ, ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾವುದೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಿವಾಸಿ, ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕಿಸಿದರು.
ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುವವರನ್ನು ನಕ್ಸಲ್‍ರಿಗೆ, ಉಗ್ರವಾದಿಗಳಿಗೆ ಹೋಲಿಕೆ ಮಾಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸಂವಿಧಾನಾತ್ಮಕವಾಗಿ ಆಯ್ಕೆಯಾಗಿ ಬಂದ ಶಾಸಕರನ್ನು ಖರೀದಿಸಿ ಒಂದು ಸರ್ಕಾರವನ್ನು ಉರುಳಿಸಿ ತಮಗೆ ಬೇಕಾದ ಸರ್ಕಾರ ಮಾಡಿಕೊಂಡ ಅಧಿಕಾರಶಾಹಿಗಳನ್ನು ಸೋಲಿಸಿ ಸಂವಿಧಾನವನ್ನು ರಕ್ಷಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆಯೆಂದು ಹೇಳಿದರು.
ಕೊಡಗಿನಲ್ಲಿ ನಿವೇಶನ, ಜಾಗದ ಮೂಲ ಬೇಡಿಕೆಯನ್ನು ಮುಂದಿರಿಸಿಕೊಂಡು ನಡೆಸುತ್ತಿರುವ ಶೋಷಿತ ಸಮುದಾಯಗಳ ಹೋರಾಟಕ್ಕೆ ಕಿಂಚಿತ್ ಗೌರವವನ್ನು ನೀಡದ ಪರಿಸ್ಥಿತಿ ಇದೆ. ಪ್ರಸ್ತುತ ಎದುರಾಗಿರುವ ಚುನಾವಣೆಯಲ್ಲಿ ಮತ ಯಾಚನೆಗೆ ಬರುವವರ ಮುಂದೆ ತಮ್ಮ ಹಕ್ಕುಗಳನ್ನು ಕೇಳುವಂತೆ ಮತ್ತು ಮೂಲ ಸೌಲಭ್ಯಗಳ ಬಗ್ಗೆ ಪ್ರಶ್ನಿಸುವಂತೆ ಸಿಪಿಐ(ಎಂಎಲ್) ವಿವಿಧ ಗ್ರಾಮೀಣ ಭಾಗಗಳಲ್ಲಿ, ಹಾಡಿಗಳಲ್ಲಿ ಅಭಿಯಾನವನನ್ನು ಹಮ್ಮಿಕೊಂಡಿರುವುದಾಗಿ ನಿರ್ವಾಣಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಹೆಚ್.ಜೆ.ಪ್ರಕಾಶ್ ಹಾಗೂ ವೈ.ಪಿ.ಮೋಹನ್ ಉಪಸ್ಥಿತರಿದ್ದರು.









