ಮಡಿಕೇರಿ ಏ.29 : ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಡಿಕೇರಿಯಲ್ಲಿ ರೋಡ್ ಶೋ ನಡೆಸುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿ ಕರ್ನಾಟಕವನ್ನು ಬಿಜೆಪಿ ಸಂಪೂರ್ಣವಾಗಿ ಗೆಲ್ಲಲಿದೆ ಮತ್ತು ಕರ್ನಾಟಕದಲ್ಲಿ ನೂರಕ್ಕೆ ನೂರು ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿಯೇ ಇಲ್ಲದಿರುವುದರಿಂದ ನಿರೀಕ್ಷೆಯ 150 ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಪ್ರತಿ ಪಕ್ಷಗಳು ‘ಮೋದಿ’ ಅವರನ್ನು ಕೆಟ್ಟ ಭಾಷೆಯಿಂದ ತೆಗಳಿದರೆ ಬಿಜೆಪಿ ಬೆಂಬಲಿಗರು, ಸಮರ್ಥಕರ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಮತ್ತೇನು ಆಗಲಾರದು ಎಂದು ಅಮಿತ್ ಶಾ ಹೇಳಿದರು.
ಪುಟ್ಟ ಜಿಲ್ಲೆ ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೋಡ್ ಶೋಗೆ ಜನ ಸೇರಿದ್ದು ನೋಡಿದರೆ ಬಿಜೆಪಿಯ ಗೆಲುವು ಮತ್ತು ಕರಾವಳಿ ಕರ್ನಾಟಕದಲ್ಲಿ ಸ್ವೀಪ್ ಖಚಿತ ಎನ್ನುವುದು ಸಾಬೀತಾಗಿದೆ. ಕೊಡಗಿನಲ್ಲಿ ಬಿಜೆಪಿಗೆ ಯಾವುದೇ ಪ್ರತಿಸ್ಪರ್ಧಿಗಳೇ ಇಲ್ಲ. ಇಲ್ಲಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.