ಮಡಿಕೇರಿ ಮೇ 9 : ಮೇಲಿನ ಎರಡೂ ಕೃತಿಗಳು ಅಂಕಣ ಬರಹಗಳ ಸಂಗ್ರಗಳಾಗಿದ್ದು, ‘ಕೊಡವ ಮಕ್ಕಡಕೂಟ(ರಿ)’ ಅವರಿಂದ ಪ್ರಕಟವಾದ ಕೊಡವ ಸಾಹಿತ್ಯ ಮಾಲೆ ಸರಣಿಯ 61 ಮತ್ತು 62ನೇ ಪುಸ್ತಕಗಳಾಗಿವೆ. ಲೇಖಕ ಬಾಳೆಯಡ ಶ್ರೀ ಕಿಶನ್ ಪೂವಯ್ಯ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಅವಳಿ ಪುಸ್ತಕಗಳನ್ನು ಇದೆ 2023 ರ, ಫೆಬ್ರವರಿ ತಿಂಗಳಿನಲ್ಲಿ ಸಾಹಿತ್ಯಲೋಕಕ್ಕೆ ಅನಾವರಣಗೊಳಿಸಿದ್ದಾರೆ.
ಕೊಡವ ಮಕ್ಕಡ ಕೂಟ(ರಿ) ಸಂಸ್ಥೆಯ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ತಮ್ಮ ಅಧ್ಯಕ್ಷರ ನುಡಿಯಲ್ಲಿ ಲೇಖಕ ಕಿಶನ್ ಪೂವಯ್ಯ ನವರ ಬಹುಮುಖ ಪ್ರತಿಭೆಯನ್ನು ವರ್ಣಿಸಿದ್ದಾರೆ. ಅಂತೆಯೇ, “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪ್ರತಿಯೊಂದು ಲೇಖನz ಬಗ್ಗೆ ಸಂಕ್ಷಿಪ್ತವಾದ ಅಭಿಪ್ರಾಯವನ್ನುಗಟ್ಟಿಯಾಗಿ ವ್ಯಕ್ತಪಡಿಸಿ, ನನ್ನ ವಿಮರ್ಶೆಯನ್ನು ತೆಳುವಾಗಿಸಿದ್ದಾರೆ. ಇನ್ನು ವಿದ್ವಾಂಶರು, ಹಿರಿಯ ವಕೀಲರಾದ ಗೌರವನ್ವಿತ ಬಾಲಸುಬ್ರಮಣ್ಯ ಕಂಜರ್ಪಣೆಯವರು ತಮ್ಮ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ಪ್ರಕೃತಿಯನ್ನು, ನೆಲ-ಜಲಸಂಪತ್ತನ್ನು, ವನಸಿರಿಯಜೊತೆಗೆ ಪ್ರಾಣಿಪಕ್ಷಿಗಳ ಸಹಬಾಳ್ವೆಯನ್ನು ಕೊಂಡಾಡುತ್ತಾ, “ಅಲ್ಲಿಗೆ ಸಲ್ಲದ ಏಕೈಕಜೀವಿ, ಮನುಷ್ಯನ” ಸ್ವಾರ್ಥಬುದ್ಧಿ, ಕಪಟತನ, ರಾಜಕೀಯ ಇತ್ಯಾದಿಗಳು, ಅದರ ಕುರಿತು ಬರೆದ ಲೇಖಕರ “ಜನಹಿತ, ಸಮಾಜಹಿತ, ಲೋಕಹಿತವನ್ನು” ಮೆಚ್ಚಿಕೊಂಡಿದ್ದಾರೆ.
ಲೇಖಕರು, ತಮ್ಮ ಬಿಡುವಿಲ್ಲದ ವಕೀಲಿ ವೃತ್ತಿಯ ನಡುವೆಯೂ; ಸಮಾಜಮುಖಿ ಚಿಂತನೆ- ಕಳಕಳಿಗಳನ್ನು ಬೆನ್ನಿಗೆಕಟ್ಟಿಕೊಂಡು ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುತ್ತಾ ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ, ವರ್ತಮಾನವನ್ನು ಭವಿಷ್ಯತ್ತಿನೊಂದಿಗೆ ಬೆಸೆಯುವ ಹೆಜ್ಜೆ ಗುರುತುಗಳನ್ನು ಈ ಬಿಡಿಬರಹಗಳಲ್ಲಿ ಗಮನಿಸಬಹುದು. ಚಿಕ್ಕ ವಯಸ್ಸಿನಿಂದಲೇ ಪತ್ರಿಕಾ ಬರವಣಿಗೆಯಲ್ಲಿ ಗುರುತಿಸಿಕೊಂಡ ಲೇಖಕಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದು ಪಳಗಿದುದರಿಂದ ಅವರ ಬರಹಗಳಲ್ಲಿ ಗಟ್ಟಿತನವಿದೆ, ಸ್ಪಷ್ಟತೆಯಿದೆ.
ಜನಾಭಿಪ್ರಾಯವಿರಲಿ, ಜನಾಂಗದ ನಿಲುವಿರಲಿ; ತಮಗೆ ಸರಿ ಅನ್ನಿಸಿದುದನ್ನು ನಿಖರವಾಗಿ ಪ್ರತಿಪಾದಿಸುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ,”ಕೊಡಗಿನಂತ ಜಿಲ್ಲೆಯಲ್ಲಿ ಒಂದು ಸಂಘಟನೆಯನ್ನು ಸಂಘಟಿಸುವುದೇ ಕಷ್ಟ. ಕೊಡಗಿನ ಜನ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಬದಲು ಸಂಘಟನೆಯನ್ನು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ” ಎಂದು ಗುರುತಿಸುತ್ತಾರೆ. “ಕೊಡಗಿನಲ್ಲಿ ಸಂಘಟನೆಗೆ ಒಂದು ನಾಯಕತ್ವವಲ್ಲ, ನಾಯಕತ್ವಕ್ಕೊಂದು ಸಂಘಟನೆ ಇದೆ” ಎಂದು ಗಮನಿಸುತ್ತಾರೆ. ಎರಡೂ ಪುಸ್ತಕಗಳಿಂದ ಒಟ್ಟು ಎಪ್ಪತ್ತಮೂರು ಅಂಕಣ ಬರಹಗಳಿದ್ದು, ಪ್ರಮುಖವಾಗಿ ವ್ಯಕ್ತಿಚಿತ್ರಣ ಮತ್ತು ಸಾಮಾಜಿಕ ಸಮಸ್ಯೆಗಳೆಂಬ ಎರಡು ಬಗೆಯ ಲೇಖನಗಳಾಗಿ ವಿಂಗಡಿಸಬಹುದು.
ಗೌರವಾನ್ವಿತ ರಾಜಕಾರಿಣಿಗಳಾದ ಅಟಲ್‍ಬಿಹಾರಿ ವಾಜಪೇಯಿಯವರಿಂದ ತೊಡಗಿ, ನಮ್ಮವರೇ ಆದ ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಜನಮೆಚ್ಚಿದ ನಟರಾದ ದಿವಂಗತ ಪುನೀತ್ ರಾಜಕುಮಾರ್, ಅಂಬರೀಷ್, ಸೇವಾಕ್ಷೇತ್ರದ ವೈದ್ಯರು; ಎಲ್ಲರ ಅವರವರ ಕ್ಷೇತ್ರದ ಸಾಧನೆ-ಕೊಡುಗೆಯ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಎರಡನೇ ಬಗೆಯ ಲೇಖನಗಳಲ್ಲಿ ಅಧಿಕಾರಿ ಶಾಹಿಗಳಲ್ಲಿ ಸ್ಥಳೀಯ ಸಂಸ್ಕೃತಿಗಳ ತಿಳುವಳಿಕೆಯ ಕೊರತೆ ಮತ್ತು ನಿರ್ಲಕ್ಷ್ಯದಿಂದ ಸರ್ಕಾರಿ ಕಾನೂನುಗಳು ಯಾವರೀತಿಯಲ್ಲಿ ಕೊಡಗಿನ ಜನಸಾಮಾನ್ಯರ ಕೊರಳಿಗೆ ಉರುಳಾಗಿ ಹೈರಾಣಾಗಿಸುತ್ತವೆ ಎಂದು ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತಾರೆ.
ಪ್ರಮುಖವಾಗಿ, ಕಂದಾಯ, ಸರ್ವೇ ಮತ್ತು ಪೊಲೀಸ್ ಇಲಾಖೆಗಳ ನ್ಯೂನತೆಗಳತ್ತ ಬೊಟ್ಟು ಮಾಡುತ್ತಾರೆ. ಕೊಡಗಿನ ನಿವಾಸಿಗಳು ಗದ್ದೆ-ತೋಟದ ಕೃಷಿಕೆಲಸ ಮಾಡಿಕೊಂಡು, ನೆಲದಮೂಲದೇವ-ದೈವಗಳ ಉತ್ಸವಗಳನ್ನು ನಡೆಸಿಕೊಂಡು ನೆಮ್ಮದಿಯಾಗಿ ಬದುಕುತಿದ್ದ ಶಾಂತಿ ಸಹಬಾಳ್ವೆ ಇಲ್ಲವಾಗಿರುವುದನ್ನು, “ಕೊಡಗಿನಲ್ಲಿ ಭೂಮಿ, ಕೋವಿ ಹೊಂದುವುದು ಶಾಪವೇ?”ಲೇಖನದಲ್ಲಿ ಪ್ರಶ್ನಿಸುತ್ತಾ; ಆಳುವವರ ಮತ್ತು ಅಧಿಕಾರಿಗಳ ಮಬ್ಬು ಗಣ್ಣಿಗೆ ಭೂತ ಗಾಜನ್ನು ಹಿಡಿಯುತ್ತಾರೆ. ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು, ಹಳೆಕಾಲದ ಪೊಲೀಸರ ಬದಲಾಗಿ, ಸಾಕಷ್ಟು ಓದಿದ ವಿದ್ಯಾವಂತರೂ ನೇಮಕವಾಗಿ ಒಳ್ಳೆಯತರಬೇತು ಪಡೆದರೂ, ಅವರು ಸಾರ್ವಜನಿಕ ಸ್ನೇಹಿ ಮನೋಭಾವವನ್ನು ರೂಢಿಸಿಕೊಳ್ಳದಿರುವುದನ್ನು ಖೇದದಿಂದ ವಿವರಿಸುತ್ತಾರೆ. ಅಂತೆಯೇ ಮತ್ತೊಂದು ಲೇಖನದಲ್ಲಿ, ಟಿಪ್ಪು ಜಯಂತಿಯನ್ನು ಆಚರಿಸುವುದು ಇಲ್ಲವೇ ಬಿಡುವುದು ವೈಯಕ್ತಿಕ ವಿಚಾರವೆಂಬ ಲೇಖಕರ ಉದಾರ ನಿಲುವಿನಲ್ಲಿ ಕೋಮು ಸೌಹಾರ್ದ ಭಾವನೆಯನ್ನು ಬಿಂಬಿಸುತ್ತಾರೆ. ಎಲ್ಲದಿಕ್ಕಿಂತಲೂ ಮೇಲಾಗಿ, ಕೊಡಗು, ಕಾವೇರಿತಾಯಿ, ಪ್ರಕೃತಿ ಮತ್ತು ಸಂಸ್ಕೃತಿ ಆಚರಣೆ ಮುಖ್ಯವೆನ್ನುವ ಅವರ ಹೃದಯದ ಧ್ವನಿ ಲೇಖನಗಳಲ್ಲಿ ಆಗಾಗಪ್ರತಿ ಧ್ವನಿಸುತ್ತದೆ.
ಕೊಡಗಿನ ತಾಯಿ, ಕಾವೇರಿ ಮಾತೆಯ ಆಚರಣೆಯ ಬಗ್ಗೆ ಇತ್ತೀಚಿಗೆ ಪ್ರಮುಖ ಜನಾಂಗಗಳು ಪರಸ್ಪರ ಮೇಲಾಟ ಸಾಧಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಕೊಡವ ಭಾಷಾಲೇಖನದಲ್ಲಿ ಅತ್ಯಂತ ಸಾವಧಾನ ಚಿತ್ತದ ಸಲಹೆ, ಸೂಚನೆಗಳನ್ನು ಲೇಖಕರು ಪ್ರತಿಪಾದಿಸಿರುವುದು ಅವರ ಪ್ರಬುದ್ಧಮನಸ್ಥಿತಿಗೆ ಸಾಕ್ಷಿಯಂತಿದೆ. “ನಂಗಡಜಮ್ಮು, ನಂಗಡಕುಪ್ಯ, ನಂಗಡಶಿಸ್ತ್, ನಂಗಡಗತ್ತ್, ನಂಗಡಮಣ್ಣ್ ” ಎನ್ನುವ ಮನೋಭಾವನೆ ಕೊಡಗಿನ ಉಳಿವಿಗೆ ಬೇಕಾಗಿದೆ ಅನ್ನುವುದು ಲೇಖಕರ ಕಳಕಳಿಯಾಗಿದೆ.
ಪ್ರವಾಸೋದ್ಯಮ ಮತ್ತು ರೆಸಾರ್ಟ್ ಸಂಸ್ಕೃತಿಯ ದೆಸೆಯಿಂದ ಕೊಡಗಿನ ಮಣ್ಣು-ಪರಿಸರಕ್ಕೆ ಇನ್ನಿಲ್ಲದ ಬೇಡಿಕೆ, ಬೆಲೆ ಇರುವುದರಿಂದ, ತಮ್ಮ ಭೂಮಿನೆಲೆಯನ್ನು ಹೊರಗಿನವರಿಗೆ ಮಾರಿಕೊಂಡು ಐನ್ಮನೆ-ದೇವನೆಲೆ, ಕೃಷಿಭೂಮಿಯನ್ನು ಕಡೆಗಣಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಲೇಖಕ ಕಿಶನ್ ಪೂವಯ್ಯ ನವರು, ತಮ್ಮ ಎರಡೂ ಅಂಕಣ ಸಂಗ್ರಹ ಬರಹಗಳಲ್ಲಿ ಸಮಕಾಲೀನ ಗಂಭೀರ ವಿಷಯಗಳನ್ನು ವಸ್ತುನಿಷ್ಠವಾಗಿ ಸಮಾಜದ ಎದುರು ತೆರೆದಿಟ್ಟಿದ್ದು, ಅನೇಕ ಸಮಸ್ಯೆಗಳ ಕುರಿತು ಹೋರಾಟವನ್ನು ಮಾಡಿ ಸರಿಪಡಿಸಿದ್ದೂ ಇದೆ. ಇನ್ನೂ ಹಲವಾರು ತಪ್ಪುಗಳನ್ನು ಒಪ್ಪುಗಳನ್ನಾಗಿಸುವುದು ಸಮಾಜದ, ಸರ್ಕಾರದ, ಇಲಾಖೆಗಳ; ಒಟ್ಟಿನಲ್ಲಿ ನಮ್ಮ-ನಿಮ್ಮೆಲ್ಲರ ಹೊಣೆ ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವಿಮರ್ಶಾ ಲೇಖನ : ವಿಶ್ವನಾಥ್ ಎಡಿಕೇರಿ, ಬೆಂಗಳೂರು.