ನಾಪೋಕ್ಲು ಮೇ 15 : ನಾಪೋಕ್ಲು ಮೂರ್ನಾಡು ಸಂಪರ್ಕಿಸುವ ಮುಖ್ಯರಸ್ತೆ ಹೊದ್ದೂರು ರಸ್ತೆಯಲ್ಲಿ ಬಿದ್ದಿರುವ ಮರದ ತುಂಡುಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಾಹನ ಚಾಲಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹೊದ್ದೂರು ಗ್ರಾಮದಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದ ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಹೊದ್ದೂರು ಗ್ರಾಮದ ಬಳಿ ಮುಖ್ಯ ರಸ್ತೆಯ ಬದಿಯಲ್ಲಿದ್ದ ಭಾರಿ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಅಲ್ಲದೆ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿತ್ತು.
ಬಳಿಕ ಮರವನ್ನು ಸೆಸ್ಕ್ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು ಸೇರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದರು. ಆದರೆ ರಸ್ತೆಯಲ್ಲಿರುವ ಮರವನ್ನು ಪೂರ್ಣ ಪ್ರಮಾಣದಲ್ಲಿ ತೆರೆವುಗೊಳಿಸದೆ ಅರ್ಧದಷ್ಟು ಅಲ್ಲೇ ಬಿಟ್ಟು ಹೋಗಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಹಗಲಿರುಳು ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಬಿದ್ದಿರುವ ಮರದ ತುಂಡುಗಳಿಂದ ಅಪಘಾತವಾಗುವ ಸಂಭವ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಸಂಬಂಧಪಟ್ಟವರು ತಕ್ಷಣ ರಸ್ತೆಯಲ್ಲಿ ಬಿದ್ದಿರುವ ಮರದ ತುಂಡುಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಚಾಲಕರು ಮತ್ತು ಸಾರ್ವಜನಿಕರು ಆಗ್ರಹಿಸಿದರು.
ವರದಿ :ಝಕರಿಯ ನಾಪೋಕ್ಲು