ಮಡಿಕೇರಿ ಮೇ 18 : ಬಾಳೆಯಡ ಕುಟುಂಬಸ್ಥರಿಂದ ನಾಪೋಕ್ಲುವಿನಲ್ಲಿ ಆಯೋಜಿತ 21ನೇ ವರ್ಷದ ‘ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ’ಯ ಫೈನಲ್ ಹಾಗೂ ಸಮಾರೋಪ ಸಮಾರಂಭ ಮೇ 21 ರಂದು ನಡೆಯಲಿದೆ ಎಂದು ಕ್ರೀಡಾಕೂಟದ ಅಧ್ಯಕ್ಷ ¯ಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಿಕ ಫೈನಲ್ ಪಂದ್ಯ ನಡೆಯಲಿದೆಯೆಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ 1975ರ ಹಾಕಿ ವಲ್ರ್ಡ್ ಕಪ್ ವಿಜೇತ ಭಾರತ ತಂಡದ ಆಗಿನ ಕ್ಯಾಪ್ಟನ್ ಪದ್ಮಶ್ರೀ ಅಜಿತ್ ಪಾಲ್ ಸಿಂಗ್, ಅಂದಿನ ಭಾರತ ತಂಡದ ಸದಸ್ಯ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಪಿ.ಗೋವಿಂದ, ಒಲಂಪಿಯನ್ ವಿ.ಜೆ. ಫಿಲಿಪ್ಸ್, ಒಲಂಪಿಯನ್ ಅಸ್ಲಾಂ ಶೇರ್ ಖಾನ್, ವಿಶ್ವ ಕಪ್ ಹಾಕಿ ವಿಜೇತ 1975ರ ಭಾರತ ತಂಡದ ಸದಸ್ಯ ಪೈಕೆರ ಕಾಳಯ್ಯ, ಬ್ರಿಗೇಡಿಯಾರ್ ಹರಿ ಚರಣ್ ಸಿಂಗ್, ಟ್ರಿಪಲ್ ಒಲಂಪಿಯನ್ ಮನೆಯಪಂಡ ಎಂ.ಸೊಮಯ್ಯ, ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪಾಲಿಬೆಟ್ಟದ ಚೆಷೈರ್ ಹೋಮ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಕಳೆದ ಏ.22 ರಿಂದ ಆರಂಭವಾದ ಬಾಳೆಯಡ ಕ್ರಿಕೆಟ್ ನಮ್ಮೆಯಲ್ಲಿ ದಾಖಲೆಯ 252 ಕುಟುಂಬಗಳು ಪಾಲ್ಗೊಂಡಿದ್ದು, ಮೇ19ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಬಹುಮಾನ : ಈ ಬಾರಿಯ ಪಂದ್ಯಾವಳಿ ವಿಜೇತ ತಂಡಕ್ಕೆ 75 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ, ತೃತೀಯ 25 ಸಾವರ ಮತ್ತು ನಾಲ್ಕನೇ ಬಹುಮಾನವಾಗಿ 15 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಬಹುಮಾನಗಳನ್ನು ರಿಪಬ್ಲಿಕ್ ಟಿವಿಯ ಚೇನಂಡ ಕಿಶನ್, ಒಲಂಪಿಯನ್ ಎಸ್.ವಿ. ಸುನಿಲ್, ಬಾಳೆಯಡ ಕುಟುಂಬಸ್ಥರು ಪ್ರಾಯೋಜಿಸಿದ್ದಾರೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿ ಕಾರ್ಯದರ್ಶಿ ಸದಾ ಕುಶಾಲಪ್ಪ, ಒಲಂಪಿಯನ್ ಬಾಳೆಯಡ ಪೂಣಚ್ಚ, ಬಾಳೆಯಡ ಕುಟುಂಬಸ್ಥರಾದ ಬಾಳೆಯಡ ನೀಮಾ ಶಿವು, ಬಾಳೆಯಡ ಅಂಜು ಸುಬ್ರಮಣಿ, ಬಾಳೆಯಡ ದಿವ್ಯ ಮಂದಪ್ಪ ಉಪಸ್ಥಿತರಿದ್ದರು.