ಮಡಿಕೇರಿ ಡಿ.20 NEWS DESK : ಮಾಂಸದ ಆಸೆಗಾಗಿ ಕಾಡು ಹಂದಿ, ಜಿಂಕೆ, ಕಡವೆ, ಮೊಲ ಸೇರಿದಂತೆ ಮತ್ತಿತರ ವನ್ಯಜೀವಿಗಳಿಗೆ ಉರುಳು ಹಾಕಿ ಬೇಟೆಯಾಡಿದರೆ ಕನಿಷ್ಟ 3 ವರ್ಷ, ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಚೆಟ್ಟಳ್ಳಿ ಗ್ರಾಮದಲ್ಲಿ ಉರುಳಿಗೆ ಸಿಲುಕಿ ಹುಲಿಯೊಂದು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳನ್ನು ಬೇಟೆಯಾಡದಂತೆ ಪತ್ರಿಕಾ ಪ್ರಕಟಣೆ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಉರುಳುಗಳನ್ನು ಬಳಸಿ ವನ್ಯಜೀವಿಗಳನ್ನು ಬೇಟೆಯಾಡುವುದು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಅಪರಾಧವಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಉರುಳುಗಳನ್ನು ಹಾಕುವುದು ಮತ್ತು ವನ್ಯ ಪ್ರಾಣಿಗಳನ್ನು ಹಿಡಿಯುವ ಪ್ರಯತ್ನ ಮಾಡುವುದೂ ಅಪರಾಧವಾಗಿದೆ. ಈ ರೀತಿಯ ಅಪರಾಧ ಮಾಡಿದಲ್ಲಿ ಕನಿಷ್ಟ 3 ವರ್ಷ ಮತ್ತು ಗರಿಷ್ಠ 7 ವರ್ಷಗಳ ಜೈಲು ಹಾಗೂ 5 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವನ್ಯಜೀವಿಗಳ ಮಾಂಸದ ಆಸೆಗೆ ಸಾರ್ವಜನಿಕರು ತಮ್ಮ ಭೂಮಿ ಅಥವಾ ತೋಟದಲ್ಲಿ ಉರುಳುಗಳನ್ನು ಹಾಕಿದ್ದರೆ ಸ್ವಯಂಪ್ರೇರಿತರಾಗಿ ಅವುಗಳನ್ನು ತೆಗೆಯುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರಾದರು ಉರುಳು ಹಾಕುವ ಕಾರ್ಯದಲ್ಲಿ ನಿರತರಾಗಿದ್ದರೆ ಅಂತಹವರ ವಿವರಗಳನ್ನು ಹತ್ತಿರದ ಅರಣ್ಯ ಇಲಾಖೆ ಕಚೇರಿ ಅಥವಾ ಸಿಬ್ಬಂದಿಯ ಗಮನಕ್ಕೆ ತರಬೇಕೆಂದು ಕೋರಿದ್ದಾರೆ.










