ಮಡಿಕೇರಿ ಡಿ.20 NEWS DESK : ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ ಗಭಿ೯ಣಿ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಮಡಿಕೇರಿ ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಪ್ರಭಾವತಿ ಮಾತನಾಡಿ, ಮಕ್ಕಳು ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಶಿಕ್ಷಣದ ಕಡೆ ಮಾತ್ರ ಗಮನ ಹರಿಸಬೇಕು. ಓದುವ ವಯಸ್ಸಿನಲ್ಲಿ ಯಾವುದೇ ಆಕರ್ಷಣೆಗೆ ಒಳಗಾಗಬಾರದು. ಅಲ್ಲದೆ ಸಮಾಜದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ಮಾತುಕತೆಯಾಗಲೀ ಒಡನಾಟವನ್ನು ಇಟ್ಟುಕೊಳ್ಳಬಾರದು. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಆಕರ್ಷಣೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಶಾಲೆಗೆ ಹೋಗುವ ಮಕ್ಕಳ ಬಗ್ಗೆ ಅವರ ತಂದೆ, ತಾಯಿಗಳು ಮಕ್ಕಳ ಆಗುಹೋಗುಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು. ಕಾನೂನು ಸಲಹೆಗಾರರಾದ ರೇವತಿ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕುರಿತು ಮಾತನಾಡಿ, ಹೆಣ್ಣು ಮಕ್ಕಳು ಮದುವೆ ವಯಸ್ಸು 18, ಗಂಡು ಮಕ್ಕಳು 21 ವರ್ಷ ಪೂರ್ಣವಾಗುವವರೆಗೂ ಮದುವೆ ಆಗಬಾರದು. ಈ ವಯೋಮಾನದ ಒಳಗೆ ಮದುವೆಯಾದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಈ ಅಪರಾಧಕ್ಕೆ ಜೈಲು ಹಾಗೂ ದಂಡ ಸಹಿತ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಿಷನ್ ಸಂಯೋಜಕರಾದ ಮಮತ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡವೋ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಹೆಣ್ಣುಮಗಳನ್ನು ರಕ್ಷಿಸಿ, ಶಿಕ್ಷಣವಂತರಾಗಿ ಮಾಡಬೇಕು. ಅಲ್ಲದೆ ಕಡಿಮೆ ಆಗುತ್ತಿರುವ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತದ ದರವನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದೆ. ಪ್ರತಿ ಮನೆಯಿಂದ ಹೆಣ್ಣು ಮಕ್ಕಳ ರಕ್ಷಣೆ ಆಗಬೇಕು ಹಾಗೂ ಉತ್ತಮ ಶಿಕ್ಷಣವಂತರಾಗಿ ಮಾಡುವ ಕರ್ತವ್ಯ ಆಕೆಯ ಪೋಷಕರಾಗಿರುತ್ತದೆ. ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತುಸೇವೆ 112 ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಶಿಕ್ಷಕ ವೃಂದದವರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.











