ಮಡಿಕೇರಿ ಮೇ 18 : ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕಂಡು ಬರುವ ಗ್ರಾಮ ವ್ಯವಸ್ಥೆಯ ಆದರ್ಶಗಳು ಮತ್ತೊಮ್ಮೆ ಪುನರ್ ನಿರ್ಮಾಣವಾಗಬೇಕೆಂದು ಬೆಂಗಳೂರಿನ ಓಶಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜುಕೇಶನ್ ಚೇರ್‍ಮೆನ್ ಡಾ.ತೇಜ್ ಪೂವಯ್ಯ ನಡಿಕೇರಿಯಂಡ ಆಶಯ ವ್ಯಕ್ತಪಡಿಸಿದರು.
ಅಲ್ಲಾರಂಡ ರಂಗಚಾವಡಿ ಹಾಗೂ ಪರದಂಡ ಚಂಗಪ್ಪ ಕುಟುಂಬಸ್ಥರ ಸಹಯೋಗದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಪರದಂಡ ಚಂಗಪ್ಪ ಅವರ 105ನೇ ಸಂಸ್ಮರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕೊಡಗಿನ ಎಲ್ಲಾ ಸಮುದಾಯಗಳು ಕೊಡವ ಭಾಷಿಕ ಸಮುದಾಯದ ಪುರಾತನ ಗ್ರಾಮ ವ್ಯವಸ್ಥೆಯಲ್ಲಿ ಒಟ್ಟಾಗಿ ಬಾಳುತ್ತಿದ್ದರು. ಒಂದು ಸಮುದಾಯ ಮತ್ತೊಂದು ಸಮುದಾಯದೊಂದಿಗೆ ಹೊಂದಿಕೊಂಡು ಬದುಕುತ್ತಿದ್ದ ಆದರ್ಶ ಸಮುದಾಯ ಇತ್ತು ಎಂಬುದನ್ನು ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ನಿರೂಪಿಸಿದ್ದಾರೆ ಎಂದರು.
ಆದರೆ ಜಾಗತೀಕರಣ ಸಂದರ್ಭದಲ್ಲಿ ಹಣಗಳಿಕೆ ಉಂಟಾದ ಕಾರಣ ಹಳೆಯ ಗ್ರಾಮ ವ್ಯವಸ್ಥೆ ಕುಸಿದು ಹೋಗಿ ಹೊಸ ಆರ್ಥಿಕ ವ್ಯವಸ್ಥೆ ಬಂದ ಕಾರಣ ಸಣ್ಣ ಸಮುದಾಯ ಮೂಲೆ ಗುಂಪಾದವು. ಇದರಿಂದ ಕೊಡಗಿನ ಸಮಾಜದ ಸಾಮಾರಸ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ಕಂಡು ಬರುವ ಗ್ರಾಮ ವ್ಯವಸ್ಥೆಯ ಆದರ್ಶಗಳು ಮತ್ತೊಮ್ಮೆ ಪುನರ್ ನಿರ್ಮಾಣವಾಗಲೆಂದು ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ಸಂತ ಜೋಸೆಫರ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪರದಂಡ ಸುನಿಲ್ ಸೋಮಯ್ಯ ಮಾತನಾಡಿ, ಪರದಂಡ ಚಂಗಪ್ಪ ಅವರು ಸೇನೆಯಲ್ಲಿ ಸುಮಾರು 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಬರವಣಿಗೆಗಾರ ಹಾಗೂ ಲೇಖಕರಾದರು.
ಹೆಚ್ಚಿನ ಶಿಕ್ಷಣ ಪಡೆಯದಿದ್ದರೂ ತಮ್ಮದೇ ರೀತಿಯಲ್ಲಿ ಪುಸ್ತಕ ಬರೆದಿರುವುದು ವಿಶೇಷ. 1986ರಲ್ಲಿ ಸಿದ್ದಾರೂಡ ಸ್ವಾಮಿ ಅವರ ಬಗ್ಗೆ ಮೊದಲ ಪುಸ್ತಕ ಬರೆದಿದ್ದು, ಒಟ್ಟು 6 ಪುಸ್ತಕಗಳನ್ನು ಜನರ ಮುಂದಿಟ್ಟಿದ್ದಾರೆ ಎಂದರು.
ಜಾನಪದ ಕಲಾವಿದ ಕುಡಿಯರ ಮುತ್ತಪ್ಪ ಮುತ್ತ್‍ನಾಡ್ ಮಲೆ ಮಾತನಾಡಿ, ಕೊಡವ ಭಾಷಿಕ ಸಮುದಾಯದಲ್ಲಿ ಕೊಡವರು ಹಿರಿಯಣ್ಣನ ಸ್ಥಾನದಲ್ಲಿದ್ದಾರೆ. ಇತರ ಕೊಡವ ಭಾಷಿಕರನ್ನು ತಮ್ಮಂದಿರಂತೆ ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗಿದೆ. ನಮ್ಮ ಹಿರಿಯರು ಈ ಮೊದಲು ನಮ್ಮ ಪೂರ್ವಿಕರನ್ನು ಸ್ವಂತ ಕುಟುಂಬದಂತೆ ಕಂಡು ಸಲಹೆ ಸಹಕಾರ ನೀಡುತ್ತಿದ್ದರು. ಮತ್ತೆ ಈ ಒಗ್ಗಟ್ಟು ಮರಳಿ ಮೂಡಬೇಕಿದೆ. ಅದು ಅಲ್ಲರಂಡ ರಂಗಚಾವಡಿ ನಡೆಸಿದ ಪರದಂಡ ಚಂಗಪ್ಪ ಅವರ ಕಾರ್ಯಕ್ರಮ ಮೂಲಕ ಪ್ರಯತ್ನಿಸಿರುವುದು ಸ್ವಾಗತರ್ಹ ಎಂದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕೊಡವ 18 ನಿವಾಸಿಗಳೆಲ್ಲರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವುದರಿಂದ ಒಗ್ಗೂಡಲು ಸಾಧ್ಯವಾಗಿದೆ ಎಂದರು.
ಪರದಂಡ ಚಂಗಪ್ಪ ಅವರ ಕೃತಿಯಲ್ಲಿ ವ್ಯಕ್ತವಾದ ಆಶಯಗಳನ್ನು ಮುಂದಿನ ನವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳೊಡನೆ ಹೊಂದಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಮೋಹನ್ ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಾರಂಡ ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಪ್ರಾಸ್ತವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಪದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಬ್ಬೆಮಲೆ ಶಾರದ ಸೋಮಯ್ಯ, ಕೊಡವ ಭಾಷೆಯ ಪ್ರಪ್ರಥಮ ಆದಿ ಅಂತ್ಯಪ್ರಾಸ ಕವಿಯಿತ್ರಿ ಪಂದ್ಯಂಡ ರೇಣುಕಾ ಸೋಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.