ಮಡಿಕೇರಿ ಮೇ 21 : ಗರ್ಭಿಣಿ ಕಾಡಾನೆಯೊಂದನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ಬಾಳುಗೋಡು ಎಂಬಲ್ಲಿ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 18 ರಿಂದ 20 ವರ್ಷದ ಹೆಣ್ಣಾನೆಗೆ ಎರಡು ಗುಂಡು ತಗುಲಿದೆ ಎಂದು ಹೇಳಲಾಗಿದ್ದು, ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಭಾನುವಾರ ಬೆಳಗ್ಗೆ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದ ಸಂದರ್ಭ ಕಾಡಾನೆ ಮೃತಪಟ್ಟ ಸ್ಥಳದಿಂದ ಅನತಿ ದೂರದಲ್ಲಿ ಖಾಲಿ ತೋಟಾಗಳು ಪತ್ತೆಯಾಗಿದೆ.
ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಡಿಸಿಎಫ್ ಶಿವರಾಮ್ ಬಾಬು, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿಗಳ ಅನಿಲ್ ಡಿಸೋಜ, ದೇವಯ್ಯ, ರಂಜನ್ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು.











