ಮಡಿಕೇರಿ ಮೇ 30 : ನೂತನ ಸರ್ಕಾರ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನೂತನ ಕೊಡವ ಅಭಿವೃದ್ದಿ ನಿಗಮದ ಅಧ್ಯಕ್ಷ/ ಆಡಳಿತ ಮಂಡಳಿಯ ಆಯ್ಕೆಯಲ್ಲಿ ಪ್ರಬುದ್ದತೆಯೊಂದಿಗೆ, ರಾಜಕೀಯಾತೀತ ಅರ್ಹರನ್ನು ಆಯ್ಕೆ ಮಾಡಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಪ್ರಮುಖ ಚಾಮೆರ ದಿನೇಶ್ ಬೆಳ್ಯಪ್ಪ, ಸರ್ಕಾರ ಬದಲಾಗಿ ನೂತನ ಸರ್ಕಾರ ಬಂದ ಸಂದರ್ಭದಲ್ಲಿ ವಿವಿಧ ನಿಗಮ ಹಾಗೂ ಸಾಹಿತ್ಯ ಅಕಾಡೆಮಿಗಳಿಗೂ ನೂತನ ಅಧ್ಯಕ್ಷರು ಹಾಗೂ ಸಮಿತಿಯನ್ನು ರಚಿಸುವುದು ವಾಡಿಕೆ. ಈ ಭಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮಂಡಳಿ, ಅಕಾಡೆಮಿಗಳಿಗೆ ನೂತನ ಆಡಳಿತ ಮಂಡಳಿ ರಚನೆಯನ್ನೂ ಮಾಡಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ತನ್ನ ಕಾರ್ಯಕರ್ತರಿಗೆ ಅದರಲ್ಲೂ ಅಸಮದಾನಿತ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಡುವ ಮೂಲಕ ಸಮಾಧಾನ ಪಡಿಸುವ ಪದ್ಧತಿ ಇದೆ. ಇದರಿಂದಾಗಿ ಎಷ್ಟೋ ಬಾರಿ ಸಾಹಿತ್ಯ ಅಕಾಡೆಮಿ ಮತ್ತು ಜನಾಂಗೀಯ ಅಭಿವೃದ್ಧಿ ನಿಗಮಗಳಲ್ಲಿ ಕೇವಲ ಅಧಿಕಾರದ ಆಸೆಯಿಂದ, ಅರ್ಹತೆಯೇ ಇಲ್ಲದವರು ಆಸೀನರಾಗಿ ಸರ್ಕಾರ ಹಾಗೂ ಆಯಾ ಸಂಸ್ಥೆಯ ಉದ್ದೇಶವೇ ಬುಡಮೇಲಾಗುವ ಸಂಭವವೇ ಹೆಚ್ಚು ಎಂದರು.
ಅತೀ ಸೂಕ್ಷ್ಮ, ಶ್ರಿಮಂತ ಸಂಸ್ಕೃತಿ ಮತ್ತು ಹಿನ್ನೆಲೆಯನ್ನು ಹೊಂದಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನೂತನವಾಗಿ ಅಸ್ಥಿತ್ವಕ್ಕೆ ಬರಲಿರುವ ಕೊಡವ ಅಭಿವೃದ್ದಿ ನಿಗಮಕ್ಕೆ ಸಮರ್ಥ ಮತ್ತು ಸಂಬಂಧಿತ ಹುದ್ದೆಯ ಅರಿವು ಇರುವ ಅನುಭವಿ, ಅಭಿಮಾನಿ ವ್ಯಕ್ತಿಗಳನ್ನೇ ಆಯ್ಕೆ ಮಾಡಬೇಕಿದೆ. ಕೇವಲ ರಾಜಕೀಯ ನೆಲೆಗಟ್ಟನ್ನು ಮಾತ್ರ ಪರಿಗಣಿಸದೆ, ಅಳಿವಿನಂಚಿನಲ್ಲಿರುವ ಜನಾಂಗ ಹಾಗೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಆಸಕ್ತಿ, ಅನುಭವ ಇರುವವರು ಅಧ್ಯಕ್ಷರಾದರೆ, ಇಡೀ ಸಮುದಾಯದ ಜೊತೆಗೆ, ಸರ್ಕಾರಕ್ಕೂ ಹಿರಿಮೆಯನ್ನು ತಂದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ರಾಜಕೀಯ ಮಾನದಂಡ ಒಂದನೇ ನೆಪವಾಗಿಟ್ಟರೆ, ಮೂರು ವರ್ಷದ ಅಧಿಕಾರಾವಧಿ ಕೇವಲ ಸಭೆ ಸಮಾರಂಭಗಳು ಮತ್ತು ಅನಾವಶ್ಯಕ ದುಂದುವೆಚ್ಚಕಷ್ಟೇ ಸೀಮಿತವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೀಗಾಗಿ ನೂತನ ಸರ್ಕಾರ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನೂತನ ಕೊಡವ ಅಭಿವೃದ್ದಿ ನಿಗಮದ ಅಧ್ಯಕ್ಷ, ಆಡಳಿತ ಮಂಡಳಿಯ ಆಯ್ಕೆಯಲ್ಲಿ ಪ್ರಬುದ್ದತೆಯೊಂದಿಗೆ, ರಾಜಕೀಯಾತೀತ ಅರ್ಹರನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸದರು.