ಮಡಿಕೇರಿ ಮೇ 31 : ಕೊಡಗು ಜಿಲ್ಲೆಯಲ್ಲಿ ಮೀನು ಕೃಷಿಗೆ ವಿಪುಲ ಅವಕಾಶಗಳಿದ್ದು, ಜಿಲ್ಲೆಯ ರೈತರು ಆಧುನಿಕ ತಂತ್ರಜ್ಞಾನದ ಮೂಲಕ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದು ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಎಸ್. ಸಚಿನ್ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಹಾಗೂ ಮೀನು ಮರಿ ಉತ್ಪಾದನೆ, ಪಾಲನಾ ಕೇಂದ್ರಕ್ಕೆ ಭೇಟಿಯ ಸಂದರ್ಭ ಮಾತನಾಡಿದ ಅವರು, ನಾವು ಭೂಮಿಯ ಮೇಲಿನ ಬೆಳೆಗಳ ಬಗ್ಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿದ್ದೇವೆ. ಆದರೆ ನೀರಿನ ಒಳಗಿನ ಕೃಷಿಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಆದರೆ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಅನ್ನವೇ ಚಿನ್ನವಾಗುವ ದಿನ ದೂರವಿಲ್ಲ ಎಂದು ನುಡಿದರು.
ಕೊಡಗು ಸೇರಿದಂತೆ ಭಾರತದಲ್ಲಿ ಮೀನು ಕೃಷಿಗೆ ಉತ್ತಮ ಅವಕಾಶವಿದ್ದು, ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವುದರ ಜೊತೆಗೆ ಮುಂದೊಂದು ದಿನ ಭಾರತ ಮೀನು ಕೃಷಿಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖೆಯಡಿ 9 ಕೆರೆಗಳಿದ್ದು, ಹಾರಂಗಿ, ಹಾಗೂ ಚಿಕ್ಲಿಹೊಳೆ ಎರಡು ಜಲಾಶಯಗಳು ಹಾಗೂ 9 ನದಿ ಭಾಗದ ಮೀನುಗಾರಿಕಾ ಪ್ರದೇಶಗಳಿದ್ದು, ಇವುಗಳನ್ನು ಇಲಾಖೆಯಿಂದ ಟೆಂಡರ್ ಮೂಲಕ ನೀಡಲಾಗುತ್ತಿದೆ. ಕೊಡಗಿನಲ್ಲಿ ಪ್ರತಿಯೊಬ್ಬ ಕೃಷಿಕರಲ್ಲೂ ಕೆರಗಳಿದ್ದು, ಇವುಗಳನ್ನು ಮೀನು ಕೃಷಿಗೆ ಬಳಸಿಕೊಂಡಲ್ಲಿ ಅವರ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದು ಎಂದ ಸಚಿನ್ ಅವರು, ಮೀನು ಕೃಷಿಗೆ ಅಗತ್ಯವಿರುವ ಮಾಹಿತಿಯ ಜೊತೆಗೆ ಮೀನು ಮರಿಗಳನ್ನು ಸರ್ಕಾರದ ದರದಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ಭಾರತದ ಪ್ರಮುಖ ಮಹಶೀರ್ ಮೀನು ಸಂವರ್ಧನ ಕೇಂದ್ರವಾಗಿ ಇದು ರೂಪುಗೊಂಡಿದ್ದು, ಸುಮಾರು 7.5 ಹೆಕ್ಟೇರ್ ಪ್ರದೇಶದ 80 ಕೊಳಗಳಲ್ಲಿ ವಾರ್ಷಿಕವಾಗಿ ಮಹಶೀರ್ ಮಾತ್ರವಲ್ಲದೆ ಇಂಜಿಯನ್ ಮೇಜ್ ಕಾರ್ಪ್ ಎಂದೇ ಕರೆಯಲಾಗುವ ಕಾಟ್ಲ, ರೋಹು, ಸಾಮಾನ್ಯ ಗೆಂಡೆ, ಮೃಗಾಲ್ ಸೇರಿದಂತೆ ವಿವಿಧ ತಳಿಯ ಅಂದಾಜು 2 ಕೋಟಿ ಮೀನು ಮರಿಗಳನ್ನು ಉತ್ಪಾದಿಸಿ ಆಸಕ್ತ ಮೀನು ಕೃಷಿಕರಿಗೆ ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಮೀನುಗಾರಿಕಾ ಇಲಾಖೆ, ವಿವಿಧ ಸಂಘಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಇದೀಗ ಕೊಡಗಿನಲ್ಲಿ ಡೆಕ್ಕನ್ ಮಹಶೀರ್ ಮೀನಿನ ತಳಿ ಕನಿಷ್ಟ ಕಾಳಜಿ ಮಟ್ಟಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಅವೈಜ್ಞಾನಿಕವಾದ ಮೀನು ಹಿಡಿಯುವುದರಿಂದಾಗಿ ಮೀನಿನ ಸಂತತಿ ನಾಶವಾಗುತ್ತಿದೆ ಎಂದು ವಿಷದವನ್ನೂ ವ್ಯಕ್ತಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗಿನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಮೀನು ಕೃಷಿಕರಿದ್ದಾರೆ. ಮೀನು ಸಾಕಾಣಿಕೆ ಮಾಡುವುದು ಹಾಗೂ ಅದರ ನಿರ್ವಹಣೆ ತಿಳಿಸಿಕೊಡುವ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚಿನ ಕೃಷಿ ಹೊಂಡಗಳಿರುವುದರಿಂದ ಬಹುತೇಕರು ಮೀನು ಕೃಷಿಯಲ್ಲಿ ತೊಡಗಿದ್ದಾರೆ. ಆದರೆ ಎಲ್ಲರಿಗೂ ಮೀನು ಕೃಷಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದ್ದರಿಂದ ಇಲಾಖೆಯ ಮೂಲಕ ರೈತರಿಗೆ ಮತ್ತಷ್ಟು ಮಾಹಿತಿ ತಿಳಿಸಿ ರೈತರ ಆದಾಯವನ್ನು ಹೆಚ್ಚಿಸುವಂತೆ ಮಾಡಬೇಕೆಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿ ಸಮಿತಿ ಅಧ್ಯಕ್ಷ ಹರೀಶ್ ಹಾಜರಿದ್ದರು.
ಸಂವಾದ ಬಳಿಕ ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದಲ್ಲಿ ಅಳವಿನಂಚಿನಲ್ಲಿರುವ ಮಹಶೀರ್ ಮೀನುಗಳ ನಿರ್ವಹಣೆ, ಮೀನು ಮರಿಗಳ ಉತ್ಪಾದನೆ, ಇತರೆ ಅಲಂಕಾರಿಕಾ ಮೀನುಗಳು ಸೇರಿದಂತೆ ಕೇಂದ್ರದ ಮಾಹಿತಿಯನ್ನು ಅಧಿಕಾರಿ ಸಚಿನ್ ನೀಡಿದರು. ಜಿಲ್ಲೆಯ ನಾನಾ ಭಾಗದ ಸುಮಾರು 20ಕ್ಕೂ ಅಧಿಕ ಮಂದಿ ಪತ್ರಕರ್ತರು ಪಾಲ್ಗೊಂಡಿದ್ದರು.
ಜುಲೈ ತಿಂಗಳಿನಲ್ಲಿ ಮೀನು ಮರಿ ವಿತರಣೆ : ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸುವ ವಿವಿಧ ತಳಿಯ ಮೀನು ಮರಿಗಳನ್ನು ಜಿಲ್ಲೆಯ ರೈತರಿಗೆ ಜುಲೈ ತಿಂಗಳಿನಲ್ಲಿ ಸರ್ಕಾರದ ದರದಲ್ಲಿ ವಿತರಿಸಲಾಗುತ್ತಿದ್ದು, ಆಸಕ್ತ ಮೀನು ಕೃಷಿಕರು ತಮ್ಮ ಹೆಸರು, ಊರು, ತಾಲೂಕು ದೂರವಾಣಿ ಸಂಖ್ಯೆಗಳೊಂದಿಗೆ ವಾಟ್ಸ್ ಆಪ್ ಸಂಖ್ಯೆ 9886717626( ಸಚಿನ್) ಅಥವಾ ಕ್ಷೇತ್ರ ಪಾಲಕರ ಸಂಖ್ಯೆ 9448918782 (ನಿರ್ವಾಣಿ)ಗೆ ಮಾಹಿತಿ ಕಳುಹಿಸಿ ಮೀನು ಮರಿಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನುಡಿದರು.
ಅಳಿವಿನಂಚಿನ ಮಹಶೀರ್ ಮೀನು ಸಂರಕ್ಷಣೆ : ಹಾರಂಗಿ ಮೀನು ಮರಿ ಉತ್ಪದನಾ ಹಾಗೂ ಪಾಲನಾ ಕೇಂದ್ರವನ್ನು 1985-86ನೇ ಸಾಲಿನ ಪಂಚವಾರ್ಷಿಕ ಯೋಜನೆಯಲ್ಲಿ ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಡಿ ಆರಂಭಿಸಲಾಗಿದ್ದು, ಪ್ರಮುಖವಾಗಿ ಅಳಿವಿನಂಚಿನಲ್ಲಿರುವ, ದೇವರ ಮೀನು ಎಂದೇ ಕರೆಯಲಾಗುವ ಮಹಶೀರ್ ಮೀನುಗಳ ಸಂತತಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಕೇಂದ್ರದಲ್ಲಿ ಸುಮಾರು 800ಕ್ಕೂ ಅಧಿಕ ತಾಯಿ ಮೀನುಗಳಿದ್ದು, ಮರಿಗಳನ್ನು ಉತ್ಪಾದಿಸಿ ಕಾವೇರಿ ನದಿಗೆ ಬಿಡುವ ಮೂಲಕ ಅಳಿವಿನಂಚಿನಲ್ಲಿರುವ ಮಹಶೀರ್ ಮೀನಿನ ಸಂತತಿಯನ್ನು ಹೆಚ್ಚಿಸಲಾಗುತ್ತಿದೆ ಎಂದು ಸಚಿನ್ ತಿಳಿಸಿದರು.