ಮಡಿಕೇರಿ ಜೂ.3 : ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂ.ಆಲೂರ ಅವರು, ನೂತನ ವಿಶ್ವ ವಿದ್ಯಾಲಯಗಳ ಕುಲಪತಿಗಳ ನಿಯೋಗದ ಜತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಶುಭ ಕೋರಿದರು.
ಈ ಸಂದರ್ಭ ಮಾತನಾಡಿದ ಮುಖ್ಯ ಮಂತ್ರಿ, ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿಶ್ವವಿದ್ಯಾಲಯಗಳಿಗಿದೆ. ದೇಶದ ಮತ್ತು ವಿದ್ಯಾರ್ಥಿಗಳ ಹಿತಕ್ಕಾಗಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ವೈಜ್ಞಾನಿಕ ತಳಹದಿಯ ಮೇಲೆ ಉನ್ನತ ಶಿಕ್ಷಣವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳಿಗೆ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಲ್ಲ ಹೊಸ ವಿಶ್ವವಿದ್ಯಾಲಯಗಳ ಕುಲಪತಿಗಳ ಪರವಾಗಿ ಪ್ರೋ.ಅಶೋಕ ಸಂ. ಆಲೂರ ಮಾತನಾಡಿ, ಈ ವರ್ಷದ ಆಯವ್ಯಯದಲ್ಲಿ ಹೊಸ ವಿಶ್ವವಿದ್ಯಾಲಯಗಳಿಗೆ ಕನಿಷ್ಟ ಒಂದು ಮಹಿಳಾ ವಿದ್ಯಾರ್ಥಿ ನಿಲಯ ಮತ್ತು ಪುರುಷ ವಿದ್ಯಾರ್ಥಿ ನಿಲಯ, ಶೈಕ್ಷಣಿಕ ಕಟ್ಟಡ ಹಾಗೂ ಪ್ರಯೋಗಾಲಯಗಳ ಸುಧಾರಣೆಗೆ ಅನುದಾನವನ್ನು ಒದಗಿಸುವಂತೆ ಕೋರಿದರು.
ಹೊಸ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದೇಶಪಾಂಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಂಗಮಶೆಟ್ಟಿ, ಬೀದರ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿರಾದಾರ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಗಂಗಾಧರ್ ಹಾಜರಿದ್ದರು.