ನಾಪೋಕ್ಲು ಜೂ.3 : ಅಕ್ರಮವಾಗಿ ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಪೋಕ್ಲು ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮದಿಂದ ಮದ್ಯರಾತ್ರಿ ಕೇರಳ ರಾಜ್ಯದ ನೊಂದಣಿ ಹೊಂದಿರುವ ಕಾರಿನಲ್ಲಿ ಅಕ್ರಮವಾಗಿ ಕಾಡುಕೋಣ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ನಾಪೋಕ್ಲು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ವಾಹನದೊಂದಿಗೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಸೆರೆ ಹಿಡಿಯಲು ಬೆನ್ನಟ್ಟಿದ ನಾಪೋಕ್ಲು ಪೊಲೀಸರು ಮಡಿಕೇರಿ ಗ್ರಾಮಾಂತರ ಪೋಲೀಸರ ಸಹಕಾರದೊಂದಿಗೆ ಮಡಿಕೇರಿ ಸಮೀಪದ ಮೇಕೇರಿ ಸುಭಾಷ್ ನಗರ ಗ್ರಾಮದ ರಸ್ತೆಯಲ್ಲಿ ಸಂಚರಿಸುವಾಗ ಆರೋಪಿಗಳ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖನಗೊಂಡಿದ್ದರಿ0ದ ಸಂಚರಿಸಲಾಗದೆ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನ ಸಮೇತ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆಬಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್, ಹೆಚ್ಚುವರಿ ಪೋಲಿಸ್ ಉಪ ಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ ಡಿವೈಎಸ್ಪಿ ಜಗದೀಶ್,ವೃತ್ತ ನಿರೀಕ್ಷಕ ಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿ ದ್ದರು.ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
ವರದಿ :ಝಕರಿಯ ನಾಪೋಕ್ಲು