ಪೊನ್ನಂಪೇಟೆ, ಜೂ.16 : ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಯ ಆತಂಕವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಫಿ ತೋಟಗಳಲ್ಲಿ ನಿರಂತರವಾಗಿ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಬೆಳೆಗಾರರಲ್ಲಿ ಮತ್ತು ತೋಟ ಕಾರ್ಮಿಕರಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಹುಲಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿ ಮುಖಂಡ ಮೂಕೊಂಡ ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ಇತ್ತೀಚಿಗೆ ಹುಲಿ ದಾಳಿ ನಡೆಸಿ ಹಸುಗಳನ್ನು ಕೊಂದು ಹಾಕಿದೆ. ಈ ಘಟನೆಯಿಂದ ಇಡೀ ಗ್ರಾಮದ ಜನರಲ್ಲಿ ಭಯ ಮೂಡಿದ್ದು, ಕಾರ್ಮಿಕರು ತೋಟದ ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಕಾಫಿ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಹುಲಿ ಮತ್ತು ಕಾಡಾನೆಗಳ ಹಾವಳಿ ಬಹುದೊಡ್ಡ ಸವಾಲಾಗಿದೆ. ಇದರಿಂದ ವನ್ಯಪ್ರಾಣಿಗಳ ಹಾವಳಿ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ವಾಹನ ಚಾಲಕರು ಜೀವಭಯದಿಂದ ವಾಹನ ಚಾಲಿಸಬೇಕಾಗಿದೆ. ಆದ್ದರಿಂದ ಇನ್ನಾದರೂ ಅರಣ್ಯ ಇಲಾಖೆ ಹುಲಿ ಮತ್ತು ಕಾಡಾನೆಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆ ಕೂಡಲೇ ಈ ಕುರಿತಂತೆ ವೈಜ್ಞಾನಿಕ ಪರಿಶೀಲನೆ ನಡೆಸಿ ಈಗಾಗಲೇ ಹುಲಿಗಳು ನಿರಂತರವಾಗಿ ಸಂಚರಿಸುವ ಮಾರ್ಗವನ್ನು ವಿಶೇಷವಾಗಿ ಗುರುತಿಸಬೇಕು. ಈ ಮಾರ್ಗದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಹುಲಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲು ಪರಿಣಿತ ಸಿಬ್ಬಂದಿಗಳನ್ನು ನೇಮಿಸಬೇಕು. ಕಾಡಾನೆಗಳ ನಿರಂತರ ದಾಳಿಗೆ ತೋಟ ಕಾರ್ಮಿಕರು ಬಲಿಯಾಗುತ್ತಿರುವ ಪ್ರದೇಶಗಳಲ್ಲೂ ವಿಶೇಷ ನಿಯಂತ್ರಣ ಕ್ರಮಗಳನ್ನು ಜರಗಿಸಬೇಕು ಎಂದು ಸಲಹೆ ನೀಡಿರುವ ವಿಜು ಸುಬ್ರಮಣ್ಯ ಅವರು, ತಿತಿಮತಿ, ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಸಿದ್ದಾಪುರ, ಮಾಲ್ದಾರೆ, ಬಾಡಗ ಬಾಣಾಂಗಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದು, ರೈತರ ಬೆಳೆಗಳನ್ನು ನಾಶಪಡಿಸಿ ಸಾಕಷ್ಟು ನಷ್ಟವನ್ನುಂಟು ಮಾಡುತ್ತಿದೆ. ಆದರಿಂದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ವಿಶೇಷ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಶಾಸಕರು ವಿಶೇಷ ಕಾಳಜಿ ವಹಿಸಬೇಕು. ಅಧಿಕಾರಿಗಳ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಿ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ತೀರ್ಮಾನಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಸಲಹೆ ನೀಡಿರುವ ವಿಜು ಸುಬ್ರಮಣಿ, ವನ್ಯಜೀವಿಗಳ ಹಾವಳಿ ತಡೆಗಟ್ಟಲು ಇನ್ನು ಮುಂದೆಯೂ ಅರಣ್ಯ ಇಲಾಖೆ ತನ್ನ ಎಂದಿನ ನಿರ್ಲಕ್ಷ್ಯವನ್ನು ಮುಂದುವರಿಸಿದರೆ ಬೆಳೆಗಾರರ ಸಂಘಟನೆಗಳ ಮತ್ತು ಪಾಲಿಬೆಟ್ಟದ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಸಹಕಾರದೊಡನೆ ಬೆಳೆಗಾರರು ಮತ್ತು ಕಾರ್ಮಿಕರನ್ನು ಸಂಘಟಿಸಿ ಅರಣ್ಯ ಇಲಾಖೆಯ ಕಚೇರಿಗಳಿಗೆ ಮುತ್ತಿಗೆ ಹಾಕಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.









