ಮಡಿಕೇರಿ ಜೂ.17 : ಇದು ಇಂದಿನ ಆಧುನಿಕ ಕಾಲದ ಚುನಾವಣೆಯ ಚಿತ್ರಣ ಯಾವ ಪ್ರಜಾಪ್ರಭುತ್ವದಡಿಯಲ್ಲಿ ಚುನಾವಣೆಗಳು ನಿಸ್ಪಕ್ಷವಾಗಿ ನಿರ್ಭಯವಾಗಿ ನಡೆಯಬೇಕಿತ್ತು. ಆದರೆ ಇಂದು ಅದರ ಚಿತ್ರಣವೇ ಬೇರೆ ಆಗಿದೆ. ನಮ್ಮ ಮತಗಳನ್ನು ನಾವು ಮಾರಾಟಕ್ಕೆ ಇಟ್ಟಿದ್ದೇವೆ. ಅದರ ಮೌಲ್ಯವನ್ನು ಅಭ್ಯರ್ಥಿ ರಾಜಕೀಯ ಪಕ್ಷಗಳು ನಿರ್ಧಾರ ಕೈಗೊಳ್ಳುತ್ತಾರೆ. ಪೈಪೋಟಿ ಹೆಚ್ಚಾದಷ್ಟು ಮತದ ಮೌಲ್ಯ ಹೆಚ್ಚಾಗುತ್ತದೆ. ಇದು ಚುನಾವಣೆಯಲ್ಲಿ ಮೌಲ್ಯ ಸಿದ್ಧಾಂತಗಳಿಗೆ ಬೆಲೆಯೆ ಇಲ್ಲ. ಚುನಾವಣೆಯೇ ಒಂದು ದೊಂಬರಾಟ ಇಲ್ಲಿ ನೀವು ಯಾರು ಯಾರನ್ನು ಬೆಂಬಲಿಸಬೇಕು ಎಂಬುದು ಅರಿಯುವುದಿಲ್ಲ. ಏಕೆಂದರೆ ನಾಯಕ ಎನಿಸಿಕೊಂಡವನು ರಾತ್ರೋ ರಾತ್ರಿ ಪಕ್ಷ ಬದಲಿಸಿ ತಮ್ಮ ಸ್ವಾರ್ಥ ಸಾಧನೆಗಾಗಿ ಕಾರ್ಯಕರ್ತರ ಬಲಿ ತೆಗೆದು ತಾವು ಬದುಕುತ್ತಾರೆ. ಒಂದು ಪಕ್ಷದಲ್ಲಿ ಅನೇಕ ವರ್ಷ ಕಾಲ ಅಧಿಕಾರ ಅನುಭವಿಸಿ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಇದ್ದವನು ಒಂದು ದಿನ ಅವನಿಗೆ ಅಧಿಕಾರ ದೊರೆಯದಿದ್ದರೆ ಪಕ್ಷ ಬದಲಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಅಧಿಕಾರ ಬೇಕು. ವಿಪರ್ಯಾಸ ಏನೆಂದರೆ ಒಂದು ಪಕ್ಷದಲ್ಲಿ ವರ್ಷಗಳ ಕಾಲ ಎಲ್ಲಾ ಅನುಭವಿಸಿ ಪಕ್ಷ ಬಿಡುವುದು ದುಃಖಕರ ವಿಷಯ. ತಾವು ನಂಬಿದ್ದ ಸಿದ್ಧಾಂತಕ್ಕೆ ತಿಲಾಂಜಲಿ ಇಡುವುದು ರಾಜಕೀಯ ದುರಂತಗಳಲ್ಲಿ ಒಂದು.
ಪ್ರಜಾಪ್ರಭುತ್ವ ಹುಟ್ಟುವಾಗಲೇ ಅದಕ್ಕಿಂತ ಹಿಂದೆಯೂ ರಾಜಮಹರಾಜ ಕಾಲದಿಂದಲೂ ಅಧಿಕಾರ ಹಿಡಿಯಲು ಎಲ್ಲಾ ತರದ ತಂತ್ರ ಕುತಂತ್ರಗಳಿಂದ ಅಧಿಕಾರ ಹಿಡಿಯುತ್ತಿದ್ದರು. ಅಂದಿನಿಂದ ಇಂದಿನವರೆಗೂ ಬಲವಿದ್ದವನ ಹತ್ತಿರ ಅಧಿಕಾರ ಕೇಂದ್ರಿಕೃತವಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಪಕ್ಷಗಳು ಕೂಡಾ ಬಲವಿದ್ದವನಿಗೆ ಅಧಿಕಾರ ನೀಡುತ್ತದೆ. ಅದು ಹಣ, ಜಾತಿ, ತೋಳ್ಬಲ, ಇವುಗಳ ಬಲ ಪ್ರಯೋಗದಿಂದ ಅಧಿಕಾರ ಪಡೆಯುತ್ತಾರೆ. ಪಡೆದ ಅಧಿಕಾರವನ್ನು ತಮ್ಮಲ್ಲಿ ಕೇಂದ್ರಿಕರಿಸಿಕೊಂಡು ತಮ್ಮ ಕಾಲ ನಂತರ ತಮ್ಮ ವಂಶಕ್ಕೆ ವರ್ಗಾಯಿಸಿಕೊಂಡು ಅಧಿಕಾರವನ್ನು ಪಕ್ಷದ ಹಿಡಿತವನ್ನು ತಾವುಗಳೇ ಹಿಡಿದಿಟ್ಟುಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ವಾಧಿಕಾರದ ಮತ್ತೊಂದು ಮುಖ.
ಹಿಂದಿನ ಕಾಲದಲ್ಲಿ ಚುನಾವಣೆ ಅಂದರೆ ಕಾರ್ಯಕರ್ತರ ಚುನಾವಣೆ ಇಂದು ಬಾಡಿಗೆ ಜನರ ಹಬ್ಬ ದಿನಕ್ಕೆ ಇಷ್ಟು ಸಂಬಳ, ಸ್ವಲ್ಪ ಹೆಂಡ ಒಂದು ಬಿರಿಯಾನಿ ಇವಿಷ್ಟು ಕೊಟ್ಟರೆ ಬೆಳ್ಳಿಗ್ಗೆಯಿಂದ ಸಂಜೆಯವರೆಗೂ ಅವರ ಕೆಲಸ ಕೊಟ್ಟವರಿಗೆ ದಿನಕ್ಕೊಂದು ಪಕ್ಷ ಹಿಂದೆ ಪಕ್ಷದ ಕಾರ್ಯಕರ್ತರು ಪಕ್ಷದ ಮೇಲಿನ ಅಭಿಮಾನದಿಂದ ಕೆಲಸ ಮಾಡುತ್ತಿದ್ದರು. ಅವರೇ ಬ್ಯಾನರ್ ಕಟ್ಟುವುದು ಕರಪತ್ರ ಹಂಚುವುದು ವೇದಿಕೆ ನಿರ್ಮಾಣ ಹೀಗೆ ಹತ್ತು ಹಲವು ಕಾರ್ಯಕ್ರಮ ಅವರೇ ಮಾಡುತ್ತಿದ್ದರು.
ಇಡೀ ಕ್ಷೇತ್ರಕ್ಕೆ ಒಂದು ವಾಹನ ಇಂದು ತಮ್ಮ ಬಲ ಪ್ರದರ್ಶನ ಮಾಡಲು ವಾಹನಗಳ ರ್ಯಾಲಿ, ಬೈಕ್ ಜಾಥಾ, ರೋಡ್ ಶೋ ನಾಯಕರ ಮೇಲೆ ಪುಷ್ಪ ಎರಚುವುದು ಇದೆಲ್ಲ ಹೊಸ ಅವತಾರ ಅದರೊಡನೆ ಉಚಿತ ಭಿಕ್ಷೆ ನೀಡುವುದು ಸರ್ವೆ ಸಾಮಾನ್ಯ. ಪ್ರಸ್ತುತ ದಿನಗಳಲ್ಲಿ ಚುನಾವಣೆಗೆ ಆರು ತಿಂಗಳು ಇರುವಾಗ ಇವುಗಳ ಬಟಾವಡೆ ಶುರುವಾಗುತ್ತೆ.
ಇಂದು ಶಾಸಕನಾಗಬೇಕೆಂದ್ರೆ ಕೋಟಿ ಹಣ ಬೇಕು. ಕೆಲವು ಪಕ್ಷಗಳಲ್ಲಿ ಟಿಕೆಟಿಗೆ ಅರ್ಜಿ ಹಾಕುವಾಗಲೆ ಲಕ್ಷ ಠೇವಣಿ ಇಡಬೇಕು. ಹಿಂದೆ ರಾಜ ಮಹಾರಾಜರಿಗೆ ಕಪ್ಪ ಕಾಣಿಕೆ ನೀಡುತ್ತಿದ್ದರು. ಇಂದು ಪಕ್ಷದ ಹೈಕಮಾಂಡ್ಗೆ ಸಲ್ಲಿಸಬೇಕು ಇಂದು ವ್ಯಾಪಾರ ಆಗಿದೆ.
ನನ್ನ ಅರಿವಿಗೆ ಬಂದಲ್ಲಿಂದ ನಾನು ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಂದು ಚುನಾವಣೆ ಪ್ರಚಾರ ಅಂದ್ರೆ ನಾಯಕರ ಭಾಷಣ ಆಕರ್ಷಣೆ ಅಂದು ಭಾಷಣ ಕೇಳಿ ಮತ ನೀಡುತ್ತಿದ್ದರೆ ಇಂದು ಮತ ಕೇಳಿದರೆ ಎಷ್ಟು ಕೊಡುತ್ತೀರ ಅಂತಾರಲ್ಲ. ಹಿಂದೆ ಸಂತೆ ದಿನ ಪ್ರಚಾರ ಸಭೆಗಳು ನಡೆಯುತ್ತಿದ್ದವು. ಅದು ಕೂಡ ಒಂದು ಪಕ್ಷದ ನಂತರ ಇನ್ನೊಂದು ಪಕ್ಷ ಒಂದೆ ವೇದಿಕೆಯಲ್ಲಿ ಕೆಲವು ವೇಳೆ ಎದುರಾಳಿಗಳೇ ಪ್ರೇಕ್ಷಕ ಆಗಿರುತ್ತಿದ್ದರು. ಅಂದು ರಾಜಕೀಯ ಜಿದ್ದಾ-ಜಿದ್ದಿನಿಂದ ಕೂಡಿರುತ್ತಿದ್ದರು. ಆದ್ರೂ ಅವರು ಸಿದ್ಧಾಂತ ಬಿಡುತ್ತಿರಲಿಲ್ಲ. ವೈಯಕ್ತಿಕ ಟೀಕೆಗಳು ಇರುತ್ತಿರಲಿಲ್ಲ. ಪಕ್ಷದ ಸಿದ್ದಾಂತವನ್ನು ಟೀಕಿಸುತ್ತಿದ್ದರು. ಯಾರ ಚಾರಿತ್ರಿಕ ವಧೆಯು ಮಾಡುತ್ತಿರಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಕೊಡಗಿನ ವಿರಾಜಪೇಟೆ ಕ್ಷೇತ್ರದ ಎರಡು ಅಭ್ಯರ್ಥಿಗಳ ಮೇಲೆ ನಡೆಸಿದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದ್ವನಿ ಸಂದೇಶಗಳು, ಮುದ್ರಿತ ವಿಡಿಯೋಗಳು ಚುನಾಚಣೆವರೆಗೆ ಒಬ್ಬರ ಮೇಲೆ ತದನಂತರ ಇನ್ನೊಬ್ಬರ ಮೇಲೆ ಎಷ್ಟು ಕೀಳು ಮಟ್ಟದ ಎಂದರೆ ಅಭ್ಯರ್ಥಿಗಳ ಮೇಲೆ ರಕ್ತ ತಂದೆ-ತಾಯಿ ಹೀಗೆ ಅಸಹ್ಯವಾದ ಭಾಷೆಯಿಂದ ಉಪಯೋಗಿಸಿದ್ದು, ಕೊಡಗಿನ ಜನರ ಸಾರ್ವಜನಿಕ ಜೀವನಕ್ಕೆ ಕಪ್ಪು ಚುಕ್ಕಿ. ಅಂದು ಚುನಾವಣೆ ವೆಚ್ಚ ಸಾವಿರದಲ್ಲಿ ಇದ್ದದ್ದು ಇಂದು ಕೋಟಿಗೆ ಬಂದು ನಿಂತಿದೆ. ರಾಜಕಾರಣಿಗಳಿಗೂ ಚುನಾವಣೆ ಅಂದರೆ ಕನಸಿನಲ್ಲಿ ಬೆಚ್ಚಿ ಬೀಳುವಂತೆ ಆಗಿದೆ ತಾವು ತೋಡಿದ ಗುಂಡಿಗೆ ಬಿದ್ದು, ತೊಳಲಾಡುತ್ತಿದ್ದಾರೆ. ಒಂದೆಡೆ ಅಧಿಕಾರ ಇನ್ನೊಂದು ಕಡೆ ವೆಚ್ಚ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಚಿತ್ರಣ ಬೆಚ್ಚಿ ಬೀಳುವಂತೆ ಮಾಡಿದೆ. ಒಂದು ವರ್ಷದಿಂದ ನಡೆದ ರ್ಯಾಲಿಗಳು ಯಾತ್ರೆಗಳು ಅದರ ವೆಚ್ಚ ಎಲ್ಲವು ಸಾರ್ವಜನಿಕ ಹಣ. . ಹಣದೊಡನೆ ನಮ್ಮ ಸಮಯ, ಇನ್ನೂ ನಮ್ಮ ರಾಜಕಾರಣೆಗಳು ಮಾಡುವ ಭಾಷಣ ಅವರ ಭಾಷೆ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಯೋಗ್ಯತೆ ತೋರಿಸುತ್ತದೆ. ರಾಜಕಾರಣಿಗಳೇ ನಮ್ಮನಾಳುವವರು ಅವರು ನಮಗೆ ಮಾದರಿಯಾಗಿ ಇರಬೇಕಾದವರು ಅಯ್ಯೋ ಅವರನ್ನು ಮಾದರಿಯಾಗಿ ಇಟ್ಟುಕೊಂಡರೆ ದೇವ್ರೇ ಕಾಪಾಡಬೇಕು. ಅಷ್ಟು ಕುಲಗೆಟ್ಟಿದ್ದೆ ಅವರ ಭಾಷೆ. ಶ್ರೀ ಸಾಮಾನ್ಯ ಏನೂ ಕಡಿಮೆ ಇಲ್ಲ. ಅವರು ಹೀರೋಗಳಾಗುವುದು ಸಾಮಾಜಿಕ ಜಾಲತಾಣದಲ್ಲಿ ಚುನಾಚಣೆ ಬಂದರೆ ಸಾಕು ಸಂದೇಶಗಳ ಸರಮಾಲೆ ಆರಂಭವಾಗುತ್ತೆ. ಇವರ ಭಾಷೆ ಅಸಹ್ಯ ಹುಟ್ಟಿಸಿ ಸಮಾಜಕ್ಕೆ ಕಳಂಕ ತರುತ್ತಾರೆ. ಇಲ್ಲಿ ವ್ಯತಯ ನಿಂದನೆಗೆ ಹೆಚ್ಚು ಮಹತ್ವ ನೀಡಿ ಅಭ್ಯರ್ಥಿಗಳ ತೇಜೋವಧೆ ಮಾಡಿ ಸಂತೋಷ ಪಡುವ ಇವರ ವಿಕೃತ ಮನೋಭಾವನೆ ಸಮಾಜದಲ್ಲಿ ಕೆಟ್ಟ ಸಂಸ್ಕೃತಿಗೆ ಬುನಾದಿ ಆಗಿದೆ.
ಇತ್ತೀಚೆಗೆ ಜಿಲ್ಲೆಯ ಈಗಿನ ರಾಜಕಾರಣಿಯೊಬ್ಬರು ಮತದಾನದ ನಂತರ ಇತ್ತೀಚಿನ ದಿನಗಳ ರಾಜಕೀಯ ಬೆಳವಣಿಗೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಪ್ರತಿಯೊಬ್ಬರು ಆಯಾಯ ಪಕ್ಷಕ್ಕೆ ಬದ್ಧನಾಗಿರಬೇಕು. ಪ್ರಸ್ತುತ ರಾಜಕೀಯ ವಿದ್ಯಾಮಾನಗಳು ದುಃಖಕರವಾಗಿದೆ. ಹಿಂದೆ ತ್ಯಾಗ, ಸಮರ್ಪಣಾ ಭಾವನೆ ಇತ್ತು. ಸಿದ್ಧಾಂತಕ್ಕೆ ಬದ್ದರಾಗಿರುತ್ತಿದ್ದರು. ಆದರೆ ಇಂದು ಎಲ್ಲವೂ ಹಣದ ಮೇಲೆ ಅವಲಂಬಿತವಾಗಿರುವುದು ಸಮಾಜಕ್ಕೆ ಹಾನಿಕಾರ. ರಾಷ್ಟ್ರದಲ್ಲಿ ಎರಡು ಪಕ್ಷಗಳ ವ್ಯವಸ್ಥೆ ಇರಬೇಕು. ಜನರಲ್ಲಿ ರಾಜಕೀಯ ಆಸಕ್ತಿ ಬೆಳೆಯಬೇಕು. ಆಗ ಅದು ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಯುವ ಜನರು ತಮ್ಮ ಹಕ್ಕಿನ ಬಗ್ಗೆ ಜಾಗೃತರಾಗಿರಬೇಕು ಎಂದು ಕರೆ ನೀಡಿದರು. ಇವರ ಮಾತು ನೂರಕ್ಕೆ ನೂರು ಸತ್ಯ. ಈಗ ಯಾರು ಪಕ್ಷಕ್ಕೆ ಬದ್ಧರಲ್ಲ. ಅವರಲ್ಲಿ ರಾಜಕೀಯ ಆಸಕ್ತಿ ಇಲ್ಲ. ಯುವ ಜನರಿಗೆ ಹೋರಾಟಗಳು ಮರೆತು ಹೋಗಿದೆ. ಅದು ಅವರ ಮಾತುಗಳಲ್ಲಿ ಮರೆತು ಹೋಗಿರುವುದು ಗೊತ್ತಾಗುತ್ತದೆ. ಇಂದು ರಾಜಕೀಯ ಎಷ್ಟು ಕುಲಗೆಟ್ಟಿದೆ ಎಂದರೆ ನಾವೇನಾದರೂ ರಾಜಕೀಯದಲ್ಲಿ ಸಕ್ರಿಯವಾಗಬೇಕಾದರೆ ಒಂದು ಕೈಯಲ್ಲಿ ಕೊಡಲಿ, ಮತ್ತೊಂದು ಕೈಯಲ್ಲಿ ಹಣದ ಗಂಟು, ಬೆನ್ನ ಹಿಂದೆ ಒಂದಷ್ಟೂ ಗೂಂಡಾಗಳನ್ನು ಸಾಕಿಕೊಂಡಿರಬೇಕು.
ಕರ್ನಾಟಕದಲ್ಲಿ ಚುನಾವಣೆ ಒಂದು ಮುಗಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾದಲ್ಲಿಂದನೆ ಅದರ ಕಗ್ಗೋಲೆಗೆ ಮುನ್ನುಡಿ ಬರೆಯಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಅದು ಕಗ್ಗೋಲೆಯಾಗಿದೆ. ಎಲ್ಲಾ ರಾಷ್ಟ್ರೀಯ ಪಕ್ಷಗಳು ಕಾಂಚಾಣದ ಆಟವನ್ನು ಆಡಿದ್ದಾರೆ. ಕೆಲವರು ಸೋತರು. ಕೆಲವರು ಗೆದ್ದರು. ಆದರೆ ಪ್ರಜಾಪ್ರಭುತ್ವ ನೆಲಕಚ್ಚಿತು. ಇನ್ನೂ ಮುಂದೆ ಹಣವಿಲ್ಲದೆ ಸ್ಥಳೀಯ ಚುನಾವಣೆಯನ್ನೂ ಕೂಡ ಎದುರಿಸಲು ಸಾಧ್ಯವಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಗ್ರಾಮಪಂಚಾಯಿತಿಯಿಂದ ಹಿಡಿದು ಲೋಕಸಭೆಯವರಿಗೆ ಚುನಾವಣೆ ಶ್ರೀ ಸಾಮಾನ್ಯರಿಗೆ ಕೈಗೆಟುಕದ ಹುಳಿದ್ರಾಕ್ಷಿಯಾಗಿದೆ. ಈ ಚುನಾವಣೆ ಎಲ್ಲರಿಗೂ ನೀರು ಕುಡಿಸಿದೆ. ಪರಿಸ್ಥ್ಥಿತಿ ಇದೇ ರೀತಿ ಮುಂದುವರಿದರೆ ಸಮುದ್ರವನ್ನೆ ಕುಡಿಸಿಬಿಡುತ್ತದೆ. ರಾಜಕಾರಣಿಗಳು ಹಾಗೂ ಮುಖ್ಯವಾಗಿ ಶ್ರೀ ಸಾಮಾನ್ಯನು ಹೆಚ್ಚೆತ್ತುಕೊಳ್ಳಬೇಕು. ಏಕೆಂದರೆ ಹಣ ಮತ್ತು ಅಧಿಕಾರ ಒಬ್ಬರಲ್ಲಿ ಕೇಂದ್ರಿಕೃತವಾದರೆ ಅದು ಸಮಾಜದ ಸಾಸ್ಥ್ಯವನ್ನು ಕೆಡಿಸುತ್ತದೆ.
ಚುನಾಚಣೆಯೊಂದು ಮುಗಿದಿದೆ ಮತ್ತೊಂದು ಬರುತ್ತದೆ. ಇದೇ ರೀತಿಯ ವ್ಯವಸ್ಥೆಯಾದರೆ ಶ್ರೀ ಸಾಮಾನ್ಯನಿಗಿಲ್ಲ ಕಷ್ಟ ರಾಜಕಾರಣಿಗಳಿಗೆ ಚುನಾವಣೆ ನಿಲ್ಲುವುದಕ್ಕೆ ಕೋಟಿ ಕೋಟಿ ಬೇಕು ಖರ್ಚು ಎಲ್ಲರೂ ಮಾಡಬೇಕು ಇಲ್ಲಿ ಗೆದ್ದವನು ಸೋತ. ಸೋತವನು ಸತ್ತ. ಚುನಾಚಣೆಯ ವೆಚ್ಚಕ್ಕೆ ಕಡಿವಾಣ ಹಾಕಬೇಕು ನಿರ್ಭಂಧವಿದೆ ಆದರೆ ಅದು ಪುಸ್ತಕದಲ್ಲಿ ಉಳಿದಿದೆ ಟಿ.ಎನ್. ಶೇಷನ್ ಅಧಿಕಾರದ ಅವಧಿಯಲ್ಲಿ ಚುನಾವಣೆ ಹೇಗೆ ಸರಳವಾಗಿ ನಡೆಸಬಹುದು. ಹೇಗೆ ಕಾನೂನನ್ನು ಜಾರಿಗೆ ತರಬಹುದು. ಎಂಬುದನ್ನು ತೋರಿಸಿ ಕೊಟ್ಟರು. ಅವರ ಅವಧಿ ನಂತರ ಅದು ಗಾಳಿಯಲ್ಲಿ ತೇಲಿ ಹೋಯ್ತು. ಒಟ್ಟಿನಲ್ಲಿ ರಾಜಕಾರಣಿಗಳಿಗೆ ಅಧಿಕಾರ ಬೇಕು. ಒಬ್ಬ ರಾಜಕಾರಣಿ ಬರಿ ಮುಂದಿನ ಮತದಾನ ಹಾಗೂ ತನ್ನ ಚುನಾವಣ ಫಲಿತಾಂಶದ ಬಗ್ಗೆ ಚಿಂತಿಸುತ್ತಾನೇ ಆದರೆ ಒಬ್ಬ ಮುತ್ಸದಿ ರಾಜಕಾರಣಿ ತನ್ನ ದೇಶದ ಬಗ್ಗೆ ಚಿಂತಿಸು ತಾನೇ ತನ್ನ ಮುಂದಿನ ತಲೆಮಾರಿನ ಭವಿಷ್ಯ ಬಗ್ಗೆ ಚಿಂತಿಸುತ್ತಾನೆ?……..
ಲೇಖನ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
9448899554
ಮಡಿಕೇರಿ.