ಸೋಮವಾರಪೇಟೆ ಜೂ.19 : ಗೌಡಳ್ಳಿ ಗ್ರಾ.ಪಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಂದಿಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಗೌಡಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ಯಾವುದೇ ಅಂಜಿಕೆಯಿಲ್ಲದೆ, ರಕ್ತದಾನ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ದೇಹದಲ್ಲಿ ಹೊಸ ರಕ್ತ ಉತ್ಪಾದನೆ ನಾವೇ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯವಿಲ್ಲ. ಅದಕ್ಕಾಗಿ ಮತ್ತೊಬ್ಬರ ರಕ್ತವನ್ನು ಪಡೆಯಬೇಕಿದೆ. ಒಬ್ಬರು ರಕ್ತದಾನ ಮಾಡಿದಲ್ಲಿ, ಅದು ನಾಲ್ಕು ಜನರಿಗೆ ಉಪಯೋಗಕ್ಕೆ ಬರುವುದು. ಕೆಲವರು ಇಂದಿಗೂ ರಕ್ತದಾನ ಮಾಡಲು ಭಯಪಡುತ್ತಿದ್ದು, ಅಂತವರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ ಎಂದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಕ್ತಕ್ಕೆ ಬೇಡಿಕೆ ಅಧಿಕವಾಗಿದ್ದು, ತುರ್ತು ಸಂದರ್ಭ ಬೇರೆ ಜಿಲ್ಲೆಯಿಂದಲೂ ರಕ್ತವನ್ನು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದ ಮಾನವೀಯ ಸಮಾಜ ಕಾಣಲು ಸಾಧ್ಯ. ಅಲ್ಲದೆ, ದಾನಿಗಳಿಗೆ ಸಂಘ ಸಂಸ್ಥೆಗಳು ಉತ್ತಮ ವೇದಿಕೆಗಳ ಅವಕಾಶ ಮಾಡಿಕೊಡುವ ಮೂಲಕ ರಕ್ತಸಂಗ್ರಹಕ್ಕೆ ಮುಂದಾಗಬೇಕೆಂದರು.
ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಳೆದ ವರ್ಷದಿಂದ ನಿರಂತರವಾಗಿ ರಕ್ತದಾನ ಶಿಬಿರ ನಡೆಯುತ್ತಿದ್ದು, ಶ್ಲಾಘನೀಯ ಎಂದರು.
ಗೌಡಳ್ಳಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಅಜ್ಜಳ್ಳಿ ನವೀನ್, ಮಂಜುನಾಥ್, ವಿಶಾಲಕ್ಷಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಗಣಪತಿ, ಸಮುದಾಯ ಆರೋಗ್ಯ ಅಧಿಕಾರಿ ಭಾನು,
ಧರಣೀಶ್ ಇದ್ದರು.
ಶಿಬಿರದಲ್ಲಿ 40 ಮಂದಿ ರಕ್ತದಾನ ಮಾಡಿದರು. 60ಕ್ಕೂ ಹೆಚ್ಚಿನ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.









