ಮಡಿಕೇರಿ ಜು.3 : ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಧರಣಿ ನಿರತರು ಸಂಸತ್ ನಲ್ಲಿ ಕೊಡವ ಪ್ರಾತಿನಿಧ್ಯದ ಕುರಿತು ಗಮನ ಸೆಳೆದರು. ಸೆಂಟ್ರಲ್ ವಿಸ್ಟಾ ಇದಕ್ಕಾಗಿ ಪ್ರತ್ಯೇಕ ವಿಶೇಷ ವರ್ಚುವಲ್ ಮತ್ತು ಅಮೂರ್ತ ಲೋಕಸಭೆ ಸ್ಥಾನಗಳನ್ನು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನೀಡಬೇಕು. ಹೊಸ ಸಂಸತ್ತಿನಲ್ಲಿ ಪ್ರತಿನಿಧಿಸಲು ವಿಶೇಷವಾದ ಕೊಡವ ಸಂಸದೀಯ ಮತ್ತು ಕೊಡವ ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ವಿಶೇಷವಾದ ಕೊಡವ ಅದೃಶ್ಯ-ವರ್ಚುವಲ್ ಕ್ಷೇತ್ರಗಳನ್ನು ರಚಿಸಿ ಕೇಂದ್ರೀಯ ವಿಸ್ಟಾ ಅಂದರೆ ಹೊಸ ಸಂಸತ್ತಿನಲ್ಲಿ ನಮಗೆ ಪ್ರಾತಿನಿಧ್ಯವನ್ನು ಒದಗಿಸುವುದರ ಮೂಲಕ ಕೊಡವರು ನೈಸರ್ಗಿಕ ನ್ಯಾಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶಾಶ್ವತವಾಗಿ ಸಾಂವಿಧಾನಿಕ ಕಾರ್ಯವಿಧಾನದಲ್ಲಿ ಭಾಗವಹಿಸಲು ಪ್ರಜಾಪ್ರಭುತ್ವ ದೇಗುಲದಲ್ಲಿ ಸ್ಥಳ ನೀಡಬೇಕೆಂದು ಹೇಳಿದರು.
ಕೊಡವ ಆಕಾಂಕ್ಷೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲು ಕಾನೂನನ್ನು ಜಾರಿಗೊಳಿಸಿ, ಡಿಲಿಮಿಟೇಶನ್/ಕ್ಷೇತ್ರ ಪುನರ್‍ವಿಂಗಡಣೆ ಕಸರತ್ತು ಪ್ರಕ್ರಿಯೆಯನ್ನು 2026 ರವರೆಗೆ ಸ್ಥಗಿತಗೊಳಿಸಲಾಗಿದೆ. `ಸಂಘ” ಅಸೆಂಬ್ಲಿ ಕ್ಷೇತ್ರವು ಭಾರತದ ಈಶಾನ್ಯ ಪ್ರದೇಶದ ರಾಜ್ಯವಾದ ಸಿಕ್ಕಿಂನ 32 ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದಾಗಿದೆ. “ಸಂಘ” ಕ್ಷೇತ್ರವು ನಕ್ಷೆಯಲ್ಲಿ ಅಸ್ತಿತ್ವದಲ್ಲಿಲ್ಲ.
ಈ ಸ್ಥಾನವು ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ಮೀಸಲಾಗಿದೆ. ಬೌದ್ಧ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳು, ರಾಜ್ಯದಲ್ಲಿ 111 ಮಾನ್ಯತೆ ಪಡೆದ ಮಠಗಳಲ್ಲಿ ನೋಂದಾಯಿಸಲ್ಪಟ್ಟ 3,293 ಮತದಾರರು ಮಾತ್ರ ಈ “ಸಂಘ” ಕ್ಷೇತ್ರದ ಸ್ಥಾನಕ್ಕೆ ಸ್ಪರ್ಧಿಸಬಹುದು ಮತ್ತು ಮತ ಚಲಾಯಿಸಬಹುದು. ಇದೇ ಮಾದರಿಯಲ್ಲಿ ಕೊಡವರಿಗೂ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಕೊಡವ ಜನಾಂಗೀಯ ಲೋಕದ ಅಧಮನೀಯ ಧ್ವನಿಯಾಗಿದೆ, ಇದು ಸಾಮಾಜಿಕ-ರಾಜಕೀಯ ಮತ್ತು ಸಾಂಸ್ಕೃತಿಕ -ಜಾನಪದ ಸಂಘಟನೆಯು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಮತ್ತು ಚಿಕ್ಕ ಸೂಕ್ಷ್ಮ ಕೊಡವ ಜನಾಂಗೀಯ ಬುಡಕಟ್ಟು ಜನಾಂಗದ ಎಸ್‍ಟಿ ಟ್ಯಾಗ್‍ಗಾಗಿ ಕಳೆದ 33 ವರ್ಷಗಳಿಂದ ಶ್ರಮಿಸುತ್ತಿದೆ. ಕೊಡವರು ಅನಾದಿ ಕಾಲದಿಂದಲೂ ಕೊಡವ ಪ್ರದೇಶದ ಮೊದಲ ಆದಿಮಸಂಜಾತರು ಅಥವಾ ಕೂರ್ಗ್ ಪ್ರದೇಶದವರು, ಈ ಭೂಮಿಯ ಪ್ರಾರಂಭದಿಂದಲೂ ಕೂರ್ಗ್ ಅನ್ನು ತಮ್ಮ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯ್ನಾಡಾಗಿ ಮಾಡಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ, ಮಾಜಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಮತ್ತು ಹಿರಿಯ ರಾಜಕಾರಣಿ ಡಾ.ಸುಬ್ರಮಣಿಯನ್ ಸ್ವಾಮಿಜಿ ಸಲ್ಲಿಸಿದ ರಿಟ್ ಅರ್ಜಿ (ಪಿಐಎಲ್).ಡಬ್ಲ್ಯು.ಪಿ.ಸಂ. 7769/2033 ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಮುಂದೆ ತೀರ್ಪುಗಾಗಿ ಕಾಯ್ದಿರಿಸಲಾಗಿದೆ.
ಇತಿಹಾಸದುದ್ದಕ್ಕೂ ನಾವು ಸ್ವತಂತ್ರರಾಗಿದ್ದೇವೆ. ಕೊಡವಲ್ಯಾಂಡ್ ಯಾನೆ ಕೊಡವ ಪ್ರಾಂತ್ಯವನ್ನು ಕೊಡವ ಸೇನಾ ನಾಯಕರು, ಪಾಳೆಪಟುಗಳ ಮುಖ್ಯಸ್ಥರು ಮತ್ತು ಕುಲ ಮುಖ್ಯಸ್ಥರ ಒಕ್ಕೂಟದ ಅಡಿಯಲ್ಲಿ ಕೊಡಗ್ ದೇಶ ಎಂಬ ನಾಮಕರಣದ ಅಡಿಯಲ್ಲಿ ಗ್ರಾಮ ಗಣರಾಜ್ಯವಾಗಿ ಆಳ್ವಿಕೆ ನಡೆಸಲಾಯಿತು. ಹಿಂದಿನಿಂದಲೂ ಕೂರ್ಗ್ ಪ್ರತ್ಯೇಕ ರಾಷ್ಟ್ರ ರಾಜ್ಯವಾಗಿತ್ತು. ಭರತವರ್ಷದ 56 ಜನಪದರಾಷ್ಟ್ರಗಳಲ್ಲಿ, ಕೂರ್ಗ್ ಅಸ್ತಿತ್ವದಲ್ಲಿತ್ತು ಮತ್ತು “ಕ್ರೋಡ ದೇಶ” ಎಂದು ಪ್ರವರ್ಧಮಾನಕ್ಕೆ ಬಂದಿತು.
ನಮ್ಮ ತಾಯ್ನಾಡು ಕೊಡಗು ಕರ್ನಾಟಕಕ್ಕೆ ವಿಲೀನವಾದ ನಂತರವೇ ನಮಗೆ ಅದು ಕೊಡವ ಜನಾಂಗಕ್ಕೆ ಮರಣಶಾಸನ ಎಂದು ಅರಿವಾಯಿತು. ನಮ್ಮೆಲ್ಲರ ಭರವಸೆ, ಆಕಾಂಕ್ಷೆಗಳು ನಾಶವಾದವು. 1956 ರವರೆಗೆ ನಾವು ನಮ್ಮ ಸ್ವಂತ ಸಿಎಂ ಮತ್ತು 24 ಶಾಸಕರು ಮತ್ತು ಸಂಸದರನ್ನು ಹೊಂದಿದ್ದೇವೆ ಮತ್ತು ಭಾರತದ ಸಂವಿಧಾನ ಸಭೆಯಲ್ಲಿ ನಾವು ಪ್ರತಿನಿಧಿಗಳನ್ನು ಹೊಂದಿದ್ದೇವೆ. ಈ ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳನ್ನು ವಿಸ್ತರಿಸುವ ಬದಲು, ಕಡಿಮೆಗೊಳಿಸಲಾಯಿತು ಮತ್ತು ವ್ಯವಸ್ಥಿತವಾಗಿ ಕೆಳಮಟ್ಟಕ್ಕಿಳಿಸಲಾಯಿತು ಎಂದು ನಾಚಪ್ಪ ಆರೋಪಿಸಿದರು.
ಸಂಸತ್ತು ಮತ್ತು ಶಾಸಕಾಂಗದ ಸದಸ್ಯರಂತಹ ಉನ್ನತ ದೃಷ್ಟಿಕೋನವನ್ನು ನಿರೀಕ್ಷಿಸುವ ನಮ್ಮ ಬಯಕೆಯು ಕುಗ್ಗಿತು. ನಾವು ನಮ್ಮದೇ ಆದ ರಾಜ್ಯವನ್ನು ಹೊಂದಿದ್ದಾಗ, ಆ ಅವಧಿಯಲ್ಲಿ ನಮ್ಮ ಕೊಡವ ಜನಸಂಖ್ಯೆಯ ತೂಕ ಹೆಚ್ಚಿತ್ತು. ಆದರೆ ವಿಲೀನದ ನಂತರ, ಕರ್ನಾಟಕದ ಆಂತರಿಕ ವಿಸ್ತರಣೆ ಮತ್ತು ಆಂತರಿಕ ವಸಾಹತುಶಾಹಿ ಶಕ್ತಿಗಳಿಂದ ವ್ಯವಸ್ಥಿತವಾಗಿ ಕೂರ್ಗ್ ವಸಾಹತುಶಾಹಿಯಾಗಿದೆ. ಅವರು ನಮ್ಮ ಜನಸಂಖ್ಯಾ ತಳಹದಿಯನ್ನು ನಾಶಪಡಿಸಿದರು. ಅವರು ಕೊಡವ ತಾಯ್ನಾಡು ಕೂರ್ಗ್ ಅನ್ನು ಕರ್ನಾಟಕದ ಸಂಪನ್ಮೂಲ ಉತ್ಪಾದಿಸುವ ವಸಾಹತು ಎಂದು ಪರಿಗಣಿಸಿದ್ದಾರೆ. ರಾಜ್ಯದ ಚುನಾವಣಾ ರಾಜಕೀಯದಲ್ಲಿ ಪ್ರಮುಖ ಸಮುದಾಯಗಳು ತಮ್ಮ ಕೊಳಕು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪಂಚಾಯತಿ ಸದಸ್ಯನಾಗುವ ಬಗ್ಗೆ ಮಾತ್ರ ಯೋಚಿಸುವ ನಮ್ಮ ಮನಸ್ಥಿತಿಯನ್ನು ಅವರು ಬಂಧಿಸಿದರು/ಬಂಧಿಯಾಗಿಸಿದರು, ಅದೂ ಅವರ ಕರುಣೆಯಿಂದ. ಕೊಡವರು ಪಂಚಾಯತಿಯನ್ನು ಮೀರಿ ಯೋಚಿಸಬಾರದು ಎಂದು ಅವರು ಬಯಸಿದ್ದರು/ಉದ್ದೇಶಿಸಿದರು. ಕೊಡವರು ಈ ಆಂತರಿಕ ವಸಾಹತುಶಾಹಿ ಯಜಮಾನರಿಗೆ ತಮ್ಮ ಊಳಿಗಮಾನ್ಯ ನಿಷ್ಠೆಯನ್ನು ಪ್ರದರ್ಶಿಸಬೇಕು. ಕೊಡವ ಜನಾಂಗದವರು ಸಂಸದರಾಗುವ ಅಥವಾ ಶಾಸಕರಾಗುವ ಆಕಾಂಕ್ಷೆಯನ್ನು ವ್ಯಕ್ತಪಡಿಸುವುದು ಅವರ ಪ್ರಕಾರ ಪಾಪ. ಮತ್ತು ಅವರು ಯೋಚಿಸುವುದು ಮತ್ತು ಆಶಿಸುವುದನ್ನು ದೇಶದ್ರೋಹ ಮತ್ತು ಪ್ರಭುತ್ವದ್ರೋಹ ಕ್ರಿಯೆ ಎಂದು ಅವರು ಅನಾರೋಗ್ಯಕರ ಪ್ರವೃತ್ತಿಯನ್ನು ಸೃಷ್ಟಿಸಿದರು. ಅವರು ನಮ್ಮ ರಾಜಕೀಯ-ಶಾರೀರಿಕ ಜ್ಞಾನದ ಕೊರತೆ ಮತ್ತು ಸಾಂವಿಧಾನಿಕವಾಗಿ ನಿಷ್ಕಪಟ ಮನಸ್ಥಿತಿಯನ್ನು ಬಳಸಿಕೊಂಡರು. ಹೊರಗಿನಿಂದ ಬಂದ ಅಧಿಕಾರಿಗಳು ಪರಕೀಯ ಅಕ್ರಮಣಕಾರಿ ಶಕ್ತಿಗಳಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
1970ರ ನಂತರ ನಾವು ಕೊಡವ ಜನಾಂಗದವರು ಪಂಚಾಯಿತಿ ಸ್ಥಾನಗಳಲ್ಲಿ ಸ್ಪರ್ಧಿಸಲೂ ಸಾಧ್ಯವಾಗಲಿಲ್ಲ. ನಾವು ಯಾವುದೇ ಮೀಸಲು ವರ್ಗದ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ, ದಟ್ಟವಾದ ಜನಸಂಖ್ಯೆಯ ಕೊಡವ ಕುಗ್ರಾಮಗಳು ಮತ್ತು ಹಳ್ಳಿಗಳನ್ನು ವಿವಿಧ ಮೀಸಲಾತಿ ವರ್ಗದ ಅಡಿಯಲ್ಲಿ ವಲಸಿಗರು ಪ್ರತಿನಿಧಿಸುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಪ್ರಾತಿನಿಧ್ಯದಿಂದ ವಂಚಿತರಾಗಿದ್ದೇವೆ. ಅಂತೆಯೇ ಸಿಕ್ಕಿಂನ ಬೌದ್ಧ ಸನ್ಯಾಸಿಗಳ ಸಮುದಾಯಕ್ಕೆ ಸಮಾನವಾಗಿ ಅಮೂರ್ತ-ವರ್ಚುವಲ್ ಕ್ಷೇತ್ರದ ಅಡಿಯಲ್ಲಿ ನಮಗೆ ವಿಶೇಷ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ನ್ಯಾಶನಲ್ ಕೌನ್ಸಿಲ್ 2013 ರಲ್ಲಿ “ಸಂಘ” ಬೌದ್ಧ ಮಠದ ಮಾದರಿಯ ಕ್ಷೇತ್ರದ ಸವಲತ್ತು ನೀಡುವಂತೆ ಒತ್ತಾಯಿಸಿತ್ತು ಮತ್ತು ಈ ನಿಟ್ಟಿನಲ್ಲಿ ರ್ಯಾಲಿ ನಡೆಸುವ ಮೂಲಕ ಸಂಬಂಧಪಟ್ಟವರಿಗೆ ಪ್ರಾತಿನಿಧ್ಯವನ್ನು ನೀಡಲಾಯಿತು. ಪ್ರತ್ಯೇಕ ಕೊಡವ ಕ್ಷೇತ್ರಕ್ಕಾಗಿ ನಾವು ಕುಲದೀಪ್ ಸಿಂಗ್ ಡಿಲಿಮಿಟೇಶನ್ ಆಯೋಗಕ್ಕೆ ಮೆಮೊರಾಂಡಮ್ ಸಲ್ಲಿಸಿದ್ದೇವೆ ಎಂದರು.
ಭಾರತದ ಚುನಾವಣಾ ಆಯುಕ್ತರಲ್ಲಿ ಸಮಾಲೋಚಿಸಿದ ನಂತರವೇ ಕ್ಷೇತ್ರಗಳ ಡಿಲಿಮಿಟಿಂಗ್ ಆದೇಶಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳಿಗೆ ನೀಡಲಾಗಿದೆ. ಭಾರತದ ಚುನಾವಣಾ ಆಯುಕ್ತರಿಗೆ ಮೀಸಲಿಡಬೇಕಾದ ಕ್ಷೇತ್ರಗಳನ್ನು ಡಿಲಿಮಿಟ್/ಮರುವಿಂಗಡಣೆ ಮಾಡುವ ಅಧಿಕಾರವಿದೆ.
ಸಂವಿಧಾನದ 82 ನೇ ವಿಧಿಯ ಅಡಿಯಲ್ಲಿ, ಪ್ರತಿ ಜನಗಣತಿಯ ನಂತರ ಕಾನೂನಿನ ಮೂಲಕ ಸಂಸತ್ತು ಡಿಲಿಮಿಟೇಶನ್ ಕಾಯಿದೆಯನ್ನು ಜಾರಿಗೊಳಿಸುತ್ತದೆ. ಜಾರಿಗೆ ಬಂದ ನಂತರ, ಕಾಯಿದೆಯ ಪ್ರಾರಂಭದ ನಂತರ, ಕೇಂದ್ರ ಸರ್ಕಾರವು ಡಿಲಿಮಿಟೇಶನ್ ಆಯೋಗವನ್ನು ರಚಿಸುತ್ತದೆ. ಈ ಡಿಲಿಮಿಟೇಶನ್ ಆಯೋಗವು ಡಿಲಿಮಿಟೇಶನ್ ಕಾಯಿದೆಯ ನಿಬಂಧನೆಗಳ ಪ್ರಕಾರ ಸಂಸದೀಯ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಗುರುತಿಸುತ್ತದೆ.
ಡಿಲಿಮಿಟೇಶನ್ ಆಕ್ಟ್ 2002 ರ ನಿಬಂಧನೆಗಳ ಅಡಿಯಲ್ಲಿ ಪ್ರಸ್ತುತ ಡಿಲಿಮಿಟೇಶನ್ ಕ್ಷೇತ್ರಗಳನ್ನು 2001 ರ ಜನಗಣತಿಯ ಆಧಾರದ ಮೇಲೆ ಮಾಡಲಾಗಿದೆ. ಆದರೆ 2002 ರಲ್ಲಿ ಭಾರತದ ಸಂವಿಧಾನವನ್ನು ನಿರ್ದಿಷ್ಟವಾಗಿ ತಿದ್ದುಪಡಿ ಮಾಡಲಾಗಿದ್ದು, 2026 ರ ನಂತರದ ಮೊದಲ ಜನಗಣತಿಯವರೆಗೆ ಕ್ಷೇತ್ರಗಳ ಡಿಲಿಮಿಟೇಶನ್ ಅನ್ನು ಹೊಂದಿಲ್ಲ. ಹೀಗಾಗಿ 2001 ರ ಜನಗಣತಿಯ ಆಧಾರದ ಮೇಲೆ ವಿಂಗಡಿಸಲಾದ ಪ್ರಸ್ತುತ ಕ್ಷೇತ್ರಗಳು ಮೊದಲ ಜನಗಣತಿಯವರೆಗೂ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಜನಗಣತಿಯ ಅಂಕಿಅಂಶಗಳ ಪ್ರಕಾರ ಸಾಧ್ಯವಾದಷ್ಟು ಪ್ರತಿ ರಾಜ್ಯವು ತನ್ನ ಜನಸಂಖ್ಯೆಯ ಅನುಪಾತದಲ್ಲಿ ಲೋಕಸಭೆಯಲ್ಲಿ ಪ್ರಾತಿನಿಧ್ಯವನ್ನು ಪಡೆಯುತ್ತದೆ.
ಭಾಷಾವಾರು ರಾಜ್ಯಗಳ ಮರು-ಸಂಘಟನೆಯ ಕಾಯಿದೆಯ ಅಡಿಯಲ್ಲಿ ಕೊಡವ ಪ್ರಾಂತ್ಯದ ಭಾಗ ಕೊಡಗು “ಸಿ” ರಾಜ್ಯವನ್ನು ವಿಲೀನಗೊಳಿಸಿದ ನಂತರ, ಕರ್ನಾಟಕದ ಆಡಳಿತಗಾರರು ಕೂರ್ಗ್ ಪ್ರದೇಶದ ಸಂಪೂರ್ಣ ಜನಸಂಖ್ಯಾ ರಚನೆಯನ್ನು ಬದಲಾಯಿಸಿದರು. ಹೊರಗಿನಿಂದ ದೊಡ್ಡ ಪ್ರಮಾಣದ ಜನದಟ್ಟಣೆ ಪ್ರವಾಹದ ಒಳಹರಿವುಗಾಗಿ ಫ್ಲಡ್ ಗೇಟ್‍ಗಳು ತೆರೆದುಕೊಂಡವು. ಆ ಮೂಲಕ ಜನಸಂಖ್ಯಾ ಆಕ್ರಮಣ ಉಂಟಾಯಿತು.
ಬಹುಸಂಖ್ಯಾತವಾದವು ರಾಜಕೀಯ ಪ್ರಾಬಲ್ಯದ ಸಾಧನವಾಗಿ ಅದರ ಪ್ರಾಧಾನ್ಯತೆಯನ್ನು ಪಡೆದುಕೊಂಡಿತು. ಕರ್ನಾಟಕದ ಆಡಳಿತ ವರ್ಗವು ತಮ್ಮ ಜನರನ್ನು ಇಲ್ಲಿ ನೆಲೆಗೊಳಿಸಿದರು ಮತ್ತು ಕೂರ್ಗ್‍ನಲ್ಲಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿದರು. ಅವರ ಜನಸಂಖ್ಯಾ ತೂಕದ ಮೇಲೆ, ಅವರು ಬಂದು ಈ ಪ್ರದೇಶದಲ್ಲಿ ಅಭ್ಯರ್ಥಿಗಳಾಗಿ ಆಯ್ಕೆಯಾಗುತ್ತಾರೆ. ಎಲ್ಲಾ ಸ್ಥಳೀಯ ಆಡಳಿತ ಘಟಕಗಳು ಮತ್ತು ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ನಾವು ಕೊಡವ ಬುಡಕಟ್ಟು ಜನಾಂಗದವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಂಚಿತರಾಗಿದ್ದೇವೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಹೊಸ ಸಂಸತ್ತು ಅಂದರೆ ಭವ್ಯವಾದ ಸೆಂಟ್ರಲ್ ವಿಸ್ಟಾ ಭಾರತೀಯ ಪ್ರಜಾಪ್ರಭುತ್ವ ಮೌಲ್ಯಗಳ ಉಜ್ವಲ ಇತಿಹಾಸವನ್ನು ಪುನಃ ಬರೆಯಲು ಸ್ಥಾಪಿಸಲಾಗಿದೆ, ಇದರಲ್ಲಿ 384 ರಾಜ್ಯಸಭಾ ಸ್ಥಾನಗಳು ಮತ್ತು 888 ಲೋಕಸಭಾ ಸ್ಥಾನಗಳನ್ನು ರಚಿಸಲಾಗಿದೆ ಮತ್ತು ಈ ಸಂಸತ್ತಿನ ಒಟ್ಟು ಆಸನ ಸಾಮಥ್ರ್ಯ 1272 ಆಗಿದೆ.
ನಮ್ಮ ಸಾಂವಿಧಾನಿಕ ಸಂಸದೀಯ ಸಹಭಾಗಿತ್ವದ ಪ್ರಜಾಪ್ರಭುತ್ವದ ಈ ಅತ್ಯುನ್ನತ ಶ್ರೇಷ್ಠ ಶಾಸನ ಸಭೆಯಲ್ಲಿ ಕೊಡವ ಜನರಿಗೆ ಮುಖ್ಯವಾಗಿ ಮಿಲಿಟರಿ ಸೇವೆಯಲ್ಲಿ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಅಪಾರ ಕೊಡುಗೆಯನ್ನು ಒಪ್ಪಿಕೊಳ್ಳಬೇಕು. ನಮ್ಮ ಸೂಕ್ಷ್ಮ ಗಾತ್ರವನ್ನು ಪರಿಗಣಿಸುವ ಮೂಲಕ ಸಾಕಷ್ಟು ಪ್ರಾತಿನಿಧ್ಯದ ಅಗತ್ಯತೆಯನ್ನು ಮನಗಾಣಬೇಕು.
ಕೊಡವ ಜನರು ಸರ್ಕಾರದ ಕುಟುಂಬ ಯೋಜನಾ ನೀತಿಗಳನ್ನು ವ್ಯವಸ್ಥಿತವಾಗಿ ಮತ್ತು ಸಂಪೂರ್ಣವಾಗಿ ಅನುಸರಿಸಿದರು ಮತ್ತು ಪ್ರಚಾರ ಮಾಡಿದರು ಇದರಿಂದಾಗಿ ಅವರ ಜನಸಂಖ್ಯೆ ಇಳಿಮುಖವಾಯಿತು. ಇಂದು ಜನಸಂಖ್ಯಾ ಕೊರತೆಯಿಂದಾಗಿ ಕೊಡವರಿಗೆ ಭಾರತ ಸಂಸತ್ತಿನ ಅತ್ಯುನ್ನತ ಕಾನೂನು ರಚನೆಯಲ್ಲಿ ನಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಮೂಲಕ ಅವರನ್ನು ಶಿಕ್ಷಿಸಬಾರದು.
ಕೊಡವ ಜನಾಂಗಿಯ ಹೆಗ್ಗುರುತು/ಅಸ್ಮಿತೆ ಭಾರತೀಯ ರಾಷ್ಟ್ರೀಯ ಗುರುತಿಗೆ ಅಧೀನವಾಗಿದೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯು ಜನಾಂಗೀಯತೆ, ಭಾಷೆ, ಧರ್ಮ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಯಲ್ಲಿ ಪ್ರತಿಫಲಿಸುತ್ತದೆ, ಅದು ಅವರ ಮೌಲ್ಯ ವ್ಯವಸ್ಥೆಗಳನ್ನು ವಿಭಿನ್ನವಾಗಿ ರೂಪಿಸಿದೆ.
ಸಾಂಪ್ರದಾಯಿಕ ವಾಸಸ್ಥಳದ ಭೌಗೋಳಿಕ ಸ್ಥಳವನ್ನು ಅದೃಶ್ಯ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಾಗಿ ವಿಶೇಷ ಅಮೂರ್ತ-ವಾಸ್ತವ ಕ್ಷೇತ್ರಗಳಾಗಿ ಗುರುತಿಸುವ ಮೂಲಕ ನಮ್ಮ ಸಾಂಪ್ರದಾಯಿಕ ವಾಸಸ್ಥಳವನ್ನು ಶಾಸನಬದ್ಧವಾಗಿ ರಕ್ಷಿಸಬೇಕು. ನಮ್ಮ ಸಂವಿಧಾನದ 371 (ಎಫ್) ವಿಧಿಯ ಅಡಿಯಲ್ಲಿ ಈಶಾನ್ಯ ಭಾರತದ ಸಿಕ್ಕಿಂ ರಾಜ್ಯದಲ್ಲಿ ಬೌದ್ಧ ಸನ್ಯಾಸಿಗಳ ಸಮುದಾಯಕ್ಕಾಗಿ “ಸಂಘ” ಕ್ಷೇತ್ರದ ಸಾಲಿನಲ್ಲಿ ಕೆತ್ತಬೇಕು.
ಕೊಡಗು ರಾಜಕೀಯ-ಆಡಳಿತ ಘಟಕ ಅಂದರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವಾಗಿದ್ದರೆ ನಾವು ಅಲ್ಪ ಜನಸಂಖ್ಯೆಯಿದ್ದರೂ ಸಹ, ಅಂತಹವರು ಪ್ರತ್ಯೇಕ ಲೋಕಸಭೆ ಪ್ರಾತಿನಿಧ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಮತ್ತು ರಾಜ್ಯಸಭಾ ಪ್ರಾತಿನಿಧ್ಯ ಮತ್ತು ಅಸೆಂಬ್ಲಿ ವಿಭಾಗಗಳನ್ನು ರಚಿಸಲು ಅರ್ಹತೆ ಪಡೆಯುತ್ತೇವೆ.
ಅಲ್ಲದೆ, ಒಂದು ಪ್ರದೇಶವು ಅಗತ್ಯವಿರುವ ಜನಸಂಖ್ಯೆಯನ್ನು ಒಳಗೊಂಡಿದ್ದರೆ, ಅದು ಜಿಲ್ಲೆಯಾಗಿರುವುದು ಕಡ್ಡಾಯವಲ್ಲ. ಅಂತಹವುಗಳನ್ನು ಅದರ ಜನಸಂಖ್ಯಾ ತೂಕದ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭೆ ಎಂದು ಸೃಷ್ಟಿಸಲಾಗುತ್ತದೆ.
ಕೊಡವರು ತಮ್ಮದೇ ಆದ ಆಡಳಿತ ರಾಜಕೀಯ-ಆಡಳಿತ ಘಟಕ ಅಥವಾ ಜನಸಂಖ್ಯೆಯ ತೂಕವನ್ನು ಹೊಂದಿಲ್ಲ. ಆದ್ದರಿಂದ ಸಿಕ್ಕಿಂನಲ್ಲಿ “ಸಂಘ” ಮಾದರಿಯಲ್ಲಿ ಇಂಟ್ಯಾಂಜಿಬಲ್/ವರ್ಚುವಲ್ ಕ್ಷೇತ್ರವನ್ನು ಸೃಷ್ಟಿಸುವುದು ಮಾತ್ರ ಕಾರ್ಯಸಾಧುವಾದ ಆಯ್ಕೆಯಾಗಿದೆ.
ಎಲ್)ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ, ಬೌದ್ಧಧರ್ಮವು ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರಪಂಚದಾದ್ಯಂತ ಹಲವಾರು ಸಾವಿರ ಮಠಗಳು ಕಾರ್ಯನಿರ್ವಹಿಸುತ್ತಿವೆ. ಲಕ್ಷಾಂತರ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳು ಬೌದ್ಧ ಧರ್ಮವನ್ನು ಬೋಧಿಸುತ್ತಿದ್ದಾರೆ, ಪ್ರಚಾರ ಮಾಡುತ್ತಿದ್ದಾರೆ ಮತ್ತು ಅಭ್ಯಾಸ ಮಾಡುತ್ತಿದ್ದಾರೆ. ಭಾರತ ಸರ್ಕಾರವು ಸಿಕ್ಕಿಂನಲ್ಲಿ “ಸಂಘ” ಅಸೆಂಬ್ಲಿ ಕ್ಷೇತ್ರವನ್ನು ಅನುಮೋದಿಸಿತು ಮತ್ತು 1972 ರಲ್ಲಿ ಭಾರತಕ್ಕೆ ವಿಲೀನಗೊಳಿಸಿದಾಗ ಅದನ್ನು ಮುಂದುವರೆಸಿತು. “ಸಂಘ” ಕ್ಷೇತ್ರವನ್ನು 1958 ರಲ್ಲಿ ಸಿಕ್ಕಿಂ ಭಾರತಕ್ಕೆ ಸೇರ್ಪಡೆಗೊಳ್ಳುವ ಮೊದಲು ಪ್ರತ್ಯೇಕ ಸ್ವತಂತ್ರ ಸಾಮ್ರಾಜ್ಯವಾಗಿದ್ದಾಗ ರಚಿಸಲಾಯಿತು.
ನಾವು ಕೊಡವರು ಕೂರ್ಗ್‍ಗೆ ಮಾತ್ರ ಸೀಮಿತವಾಗಿದ್ದೇವೆ. ಕೊಡವ ಜನಾಂಗಕ್ಕೆ ಕೊಡಗಿನ ಹೊರಗೆ ಯಾವುದೇ ಸಾಂಸ್ಕೃತಿಕ ಬೇರು ಅಥವಾ ಜಾಗವಿಲ್ಲ. ಕೊಡಗು ನಮ್ಮ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯ್ನಾಡು. ಭಾರತ ಸರ್ಕಾರವು 1958 ರಲ್ಲಿ ರಚಿಸಲಾದ ಬೌದ್ಧ ಸನ್ಯಾಸಿ ಸಮುದಾಯ “ಸಂಘ” ಕ್ಷೇತ್ರದ ಹಕ್ಕುಗಳನ್ನು ಅನುಮೋದಿಸಿತು.
ಆದರೆ ಭಾರತ ಸರ್ಕಾರವು ಕೊಡವ ಜನಾಂಗದ ಎಲ್ಲಾ ಹಕ್ಕುಗಳನ್ನು ಅಂದರೆ ಲೋಕಸಭೆ, ರಾಜ್ಯಸಭಾ ಮತ್ತು ಅವರ ತಾಯ್ನಾಡಿನ ಭಾಗವಾದ ‘ಸಿ’ ರಾಜ್ಯದಲ್ಲಿ ಪ್ರಾತಿನಿಧ್ಯವನ್ನು 1956 ರಲ್ಲಿ ಕಸಿದುಕೊಂಡಿತು. ಈಗ ನಾವು ಕರ್ನಾಟಕದ ಪ್ರಮುಖ ಸಮುದಾಯಗಳಲ್ಲಿ “ರಾಜ್ಯವಿಲ್ಲದ ಜನರು ಮತ್ತು ನಗಣ್ಯರೂ” ಆಗಿದ್ದೇವೆ.
ನಮ್ಮ ಮಹಾನ್ ರಾಷ್ಟ್ರವಾದ ಭಾರತಮಾತೆಯನ್ನು ಕಷ್ಟದ ಸಮಯದಲ್ಲಿ ಕಾಪಾಡಿದ ಅಪರೂಪದ ಅನನ್ಯ ಮಾನವ ಜನಾಂಗಗಳಲ್ಲಿ ಕೊಡವರು ಅಪರೂಪ. ಈ ಪವಿತ್ರ ಭೂಮಿಯ ರೋಮಾಂಚಕ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸಲು ಅವರು ವಿದೇಶಿ ಆಕ್ರಮಣದ ವಿರುದ್ಧ ಯುದ್ಧಗಳನ್ನು ನಡೆಸಿದರು.
ಕೊಡವರು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಭಾಗಿಯಾದರು. 1ನೇ ಮತ್ತು IIನೇ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದರು, ಪಾಕಿಸ್ತಾನದ ವಿರುದ್ಧ 4 ಯುದ್ಧಗಳಲ್ಲಿ ಮತ್ತು ಚೀನಾದೊಂದಿಗಿನ ಒಂದು ಯುದ್ಧದಲ್ಲಿ ಭಾಗವಹಿಸಿದರು. ಅವರು ಪಾಕಿಸ್ತಾನ ಪ್ರಾಯೋಜಿತ ನಿಜಾಮ್ ಆರ್ಮಿ/ ಹೈದರ್‍ಬಾದ್‍ನ ರಜಾಕರ್ ಮಿಲಿಷಿಯಾ ಪಡೆಗಳನ್ನು ನಿಗ್ರಹಿಸುವಲ್ಲಿ ಭಾಗವಹಿಸಿದರು ಮತ್ತು ಪೋಲೋ ಕಾರ್ಯಾಚರಣೆಯ ಅಡಿಯಲ್ಲಿ ಅದನ್ನು ಮುಕ್ತಗೊಳಿಸಿದರು. ವಿಶ್ವಸಂಸ್ಥೆಯ ಅಸಂಖ್ಯಾತ ಶಾಂತಿಪಾಲನಾ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ.
ಈ ಎಲ್ಲಾ ಭಾಗವಹಿಸುವಿಕೆಯಲ್ಲಿ, ನಾವು ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಜನಸಂಖ್ಯೆಯನ್ನು ಕಳೆದುಕೊಳ್ಳಲು ಇದು ಒಂದು ಕಾರಣವಾಗಿದೆ. ನಾವು ಸರ್ಕಾರದ ಕುಟುಂಬ ಯೋಜನೆ ನೀತಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿದ್ದೇವೆ ಮತ್ತು ಅನುಸರಿಸಿದ್ದೇವೆ. ಹೀಗಾಗಿಯೇ ನಾವು ನಮ್ಮ ಜನನ ಅನುಪಾತಗಳನ್ನು ಕಳೆದುಕೊಂಡಿದ್ದೇವೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ನಾವು ಯುದ್ಧ ಕ್ಷೇತ್ರಗಳಲ್ಲಿ ಮತ್ತು ಸಮರ ಕ್ಷೇತ್ರಗಳಲ್ಲಿ ನಮ್ಮ ಬೃಹತ್ ಮಾನವ ಸಂಪನ್ಮೂಲಗಳನ್ನು ಕಳೆದುಕೊಂಡಿದ್ದೇವೆ ಮತ್ತು ಕುಟುಂಬ ಯೋಜನೆಯ ಅಡಿಯಲ್ಲಿ ನಮ್ಮ ರಾಷ್ಟ್ರದ ಪ್ರಗತಿಗಾಗಿ, ನಾವು ನಮ್ಮ ಜನನ ದರ/ಫಲವಂತಿಕೆಯ ಪ್ರಮಾಣವನ್ನು ಕಳೆದುಕೊಂಡಿದ್ದೇವೆ.
ಈಗ ನೀವು ಜನಸಂಖ್ಯೆಯ ಆಧಾರದ ಮೇಲೆ ಗಡಿಗಳನ್ನು ನಿಗದಿಪಡಿಸುತ್ತಿದ್ದೀರಿ ಮತ್ತು ಬದಲಾಯಿಸುತ್ತಿದ್ದೀರಿ ಮತ್ತು ಕ್ಷೇತ್ರಗಳನ್ನು ಹೆಚ್ಚಿಸುತ್ತಿದ್ದೀರಿ. ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವುದು ಕೇವಲ ತರ್ಕಬದ್ಧವಲ್ಲ ಆದರೆ ಪ್ರಜಾಪ್ರಭುತ್ವದ ಅಪಹಾಸ್ಯವಾಗಿದೆ ಮತ್ತು ಇದು ಸಂವಿಧಾನದ ಉಲ್ಲಂಘನೆಯ ಅತ್ಯುನ್ನತ ಕ್ರಮವಾಗಿದೆ, ಇದು ನಮ್ಮ ರಾಷ್ಟ್ರದ ಬಹು ಜನಾಂಗೀಯ, ಬಹು ಸಾಂಸ್ಕೃತಿಕ ಸಾಮಾಜಿಕ ರಚನೆಗೆ ಅವಮಾನ ಮತ್ತು ಅಗೌರವವಾಗಿದೆ. ಇದು ವಿರೋಧಿ ಪ್ರಬಂಧವಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆನ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಂವಿಧಾನದ ತತ್ವಗಳಿಗೆ ಬದ್ಧವಾಗಿದೆ. ನಾವು ನಮ್ಮ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಗೌರವಿಸುತ್ತಿದ್ದೇವೆ. ನಮ್ಮ ಕಾನೂನುಬದ್ಧ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳು ಸಾಂವಿಧಾನಿಕ ಚೌಕಟ್ಟಿನೊಳಗೆ ಇವೆ. ಆದ್ದರಿಂದ ಸಂಸತ್ ನಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕೆಂದು ನಾಚಪ್ಪ ಒತ್ತಾಯಿಸಿದರು.
ಸಿಎನ್‍ಸಿ ಪ್ರಮುಖರಾದ ಪುಲ್ಲೇರ ಸ್ವಾತಿ ಕಾಳಪ್ಪ, ಬೊಟ್ಟಂಗಡ ಸವಿತಾ, ಕೂಪದಿರ ಪುಷ್ಪ ಮುತ್ತಣ್ಣ, ಚೋಳಪಂಡ ಜ್ಯೋತಿ ನಾಣಯ್ಯ. ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಚಂಬಂಡ ಜನತ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅಪ್ಪಾರಂಡ ಪ್ರಸಾದ್, ಪುಟ್ಟಿಚಂಡ ದೇವಯ್ಯ, ನಂದಿನೆರವಂಡ ವಿಜು, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರೀನ್, ಪಟ್ಟಮಾಡ ಕುಶ, ಚೋಳಪಂಡ ನಾಣಯ್ಯ, ಮಂಡಪಂಡ ಮನೋಜ್, ಪುಲ್ಲೇರ ಕಾಳಪ್ಪ, ಅಳಮಂಡ ಜೈ, ಪಟ್ಟಮಾಡ ಪ್ರಕಾಶ್, ಪಟ್ಟಮಾಡ ಅಶೋಕ್, ಕೂಪದಿರ ಉತ್ತಪ್ಪ, ಕೂಪದಿರ ಸಾಬು, ಕಾಟುಮಣಿಯಂಡ ಉಮೇಶ್, ಪಾರುವಂಗಡ ನವೀನ್, ಮಂದಪಂಡ ಸೂರಜ್, ಅಜ್ಜಿನಿಕಂಡ ಮಾಚಯ್ಯ, ಮೇದುರ ಕಂಠಿ, ಪುದಿಯೊಕ್ಕಡ ಕಾಶಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡ ಅವರು ಮನವಿ ಪತ್ರ ಸ್ವೀಕರಿಸಿದರು.